- ಹೊರಹರಿವು ಪ್ರಮಾಣ 14 ಸಾವಿರ ಕ್ಯೂಸೆಕ್‌ಗೆ ಹೆಚ್ಚಳ
- ಒಳಹರಿವಿಗಿಂತ ಹೊರಹರಿವು ಹೆಚ್ಹಳ
- ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ
ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದ್ದು, ಭಾಗಶಃ ಭರ್ತಿಯಾಗಿದ್ದ ಡ್ಯಾಂನ ನೀರಿನಮಟ್ಟ ಬರೋಬ್ಬರಿ 9 ಅಡಿ ಕುಸಿದಿದೆ. ಒಳಹರಿವು ಕಡಿಮೆ ಇದ್ದರೂ ಹೊರಹರಿವು ಪ್ರಮಾಣವನ್ನು 14 ಸಾವಿರ ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ.
ಆಗಸ್ಟ್ ಮೊದಲ ವಾರದಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿತ್ತು. ಕೇರಳ ರಾಜ್ಯದ ವಯನಾಡು ಜಿಲ್ಲೆ ಸೇರಿದಂತೆ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ದಾಖಲಾಗಿತ್ತು. ಇದರ ಫಲವಾಗಿ ಒಳಹರಿವು ಹೆಚ್ಚಾಗಿದ್ದರಿಂದ ಡ್ಯಾಂ ಬಹುತೇಕ ತುಂಬಿತ್ತು. ಆದರೀಗ, ಕಬಿನಿ ಡ್ಯಾಂನ ನೀರಿನಮಟ್ಟ ನಿರೀಕ್ಷೆ ಮೀರಿ ಕುಸಿತ ಕಂಡಿದೆ.
ಶುಕ್ರವಾರ ಕಬಿನಿ ಜಲಾಶಯದಿಂದ 14,600 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದ್ದು, ಮಳೆ ಕಡಿಮೆಯಾಗಿರುವುದರಿಂದ ಒಳ ಹರಿವು 7,184 ಕ್ಯೂಸೆಕ್‌ಗೆ ಇಳಿಕೆಯಾಗಿದೆ.
ತಮಿಳುನಾಡಿಗೆ 15 ದಿನಗಳವರೆಗೆ ನಿತ್ಯ 12,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ತಮಿಳುನಾಡಿಗೆ ಹರಿಬಿಡಲಾಗುತ್ತಿದೆ.
ಸಮುದ್ರ ಮಟ್ಟದಿಂದ 2,284 ಅಡಿ ನೀರಿನ ಸಾಮರ್ಥ್ಯ ಹೊಂದಿರುವ ಕಬಿನಿ ಜಲಾಶಯದಲ್ಲಿ ಸದ್ಯಕ್ಕೆ 2,275 ಅಡಿಯಷ್ಟು ನೀರಿದೆ. 19.52 ಟಿಎಂಸಿ ಸಂಗ್ರಹ ಸಾಮರ್ಥ್ಯ ಇರುವ ಇದರಲ್ಲಿ ಈಗ 14.57 ಟಿಎಂಸಿ ನೀರಿದೆ.
ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ರೈತರ ಕೃಷಿ ಭೂಮಿಗೆ, ನಾಲೆಗಳಿಗೆ, ಕೆರೆ-ಕಟ್ಟೆಗಳಿಗೆ ನೀರು ಹರಿಸಲು ಹಿಂದೇಟು ಹಾಕಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.