ಹುಣಸೂರು ತಾಲೂಕು ಬಿಳಿಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮ ಉದ್ಘಾಟಿಸಿದರು. ಉಪಪ್ರಾಂಶುಪಾಲೆ ಸ್ನೇಹಲತಾ, ಸಿಡಿಪಿಒ ಸಿ.ಬೋರೇಗೌಡ, ಎಸ್.ಶಿವಣ್ಣೇಗೌಡ, ಧನಂಜಯಕುಮಾರ್, ಜಿಮ್ ಜೋಸ್ ಇತರರಿದ್ದರು.
ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಹುಣಸೂರು : ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳದೆ ಶಿಕ್ಷಣವೇ ಭವಿಷ್ಯದ ಶಕ್ತಿ ಎನ್ನುವುದರ ಕುರಿತು ಸಮಾಜನಕ್ಕೆ ಅರಿವು ಮೂಡಿಸಬೇಕಿದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಭಾಗ್ಯಮ್ಮಅಭಿಪ್ರಾಯಪಟ್ಟರು.
ತಾಲೂಕಿನ ಬಿಳಿಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಮೈಸೂರಿನ ಡಾನ್ ಬಾಸ್ಕೋ ಮಕ್ಕಳಾಲಯ ಹಾಗೂ ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
14 ವರ್ಷದೊಳಗಿನ ಮಕ್ಕಳ ಜೀವನವನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈ ವಯಸ್ಸಿನಲ್ಲಿ ಮಕ್ಕಳನ್ನು ಅಪಾಯಕಾರಿ ಕೆಲಸಗಳಲ್ಲಿ ತೊಡಗಿಸಿವುದು ಶಿಕ್ಷಾರ್ಹ ಅಪರಾಧವಾಗಿದೆ. ಬಾಲ ಕಾರ್ಮಿಕ ಪದ್ಧತಿಯ ವಿರುದ್ಧ ಸಾಕಷ್ಟು ಕಾನೂನುಗಳಿದ್ದರೂ ಸಮಾಜಕ್ಕೆ ಅನಿಷ್ಟಕಾರಕವಾಗಿರುವ ಈ ಪದ್ಧತಿಯ ನಿರ್ಮೂಲನೆ ಕಾನೂನು ಮತ್ತು ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ, ಬದಲಾಗಿ ಮಾನವೀಯತೆಯ ರಕ್ಷಣೆ ಬೇಕಿದೆ. ಅನಕ್ಷರತೆ, ಬಡತನ, ಅರಿವಿನ ಕೊರತೆ ಬಾಲ ಕಾರ್ಮಿಕ ಪದ್ಧತಿ ಆಚರಣೆಗೆ ಮೂಲ ಕಾರಣ. ಸುಶಿಕ್ಷಿತ ಸಮಾಜದಿಂದ ಅನಿಷ್ಠ ಪದ್ಧತಿ ನಿವಾರಣೆಯಾಗಲು ಸಾಧ್ಯ ಎಂದರು.
ನಿಮ್ಮ ಶಿಕ್ಷಣ ನಿಮ್ಮ ಹಕ್ಕು:
ಮಕ್ಕಳು ನಿಮ್ಮ ಶಿಕ್ಷಣ ನಿಮ್ಮ ಹಕ್ಕು ಎನ್ನುವುದನ್ನು ಅರಿತುಕೊಳ್ಳಬೇಕು. ಪೆನ್ನು ಪುಸ್ತಕ ಹಿಡಿಯುವ ಕೈಗಳು ಸಾಧನ ಸಲಕರಣೆಗಳನ್ನು ಹಿಡಿಯುವಂತಾಗಬಾರದು. ಪಾಲಕರು ಮತ್ತು ಸಮುದಾಯ ಒಟ್ಟಿಗೆ ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಹೋರಾಡಬೇಕಿದೆ. ಸಂವಿಧಾನದತ್ತವಾದ ಮಕ್ಕಳ ಹಕ್ಕುಗಳನ್ನು ಅವರಿಗೆ ದೊರಕಿಸಿಕೊಡುವ ಮೂಲಭೂತ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದರು.
ಕಾರ್ಮಿಕ ನಿರೀಕ್ಷಕ ಎನ್.ಮಂಜುನಾಥ್ ಮಾತನಾಡಿ, ಬಾಲಕಾರ್ಮಿಕ ಪದ್ಧತಿ ಸಾಮಾಜಿಕ ಪಿಡುಗಾಗಿದ್ದು, ಮಕ್ಕಳನ್ನು ಬಲವಂತದ ದುಡಿಮೆಗೆ ತಳ್ಳುವುದು ಅಪರಾಧವಾಗಿದೆ. ಇಷ್ಟೇ ಅಲ್ಲದೆ ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆಯಂತ ಅಕ್ರಮ ಚಟುವಟಿಕೆಗಳಿಗೆ ಮಕ್ಕಳನ್ನುತಳ್ಳುವುದನ್ನು ತಡೆಯಲು ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕಿ ಅನಿತಾ, ವಕೀಲರ ಸಂಘದ ಅಧ್ಯಕ್ಷ ಎಸ್.ಶಿವಣ್ಣೇಗೌಡ, ಕಾಲೇಜಿನ ಪ್ರಾಂಶುಪಾಲ ಧನಂಜಯ್ ಕುಮಾರ್, ಉಪಪ್ರಾಂಶುಪಾಲೆ ಸ್ನೇಹಲತಾ, ಶಿಶು ಅಬಿವೃದ್ಧಿ ಯೋಜನಾಧಿಕಾರಿ ಸಿ.ಬೋರೇಗೌಡ, ಡಾನ್ ಬಾಸ್ಕೋ ಮಕ್ಕಳಾಲಯದ ನಿರ್ದೇಶಕ ಜಿಮ್ ಜೋಸ್, ಎಸ್‌ಡಿಎಂಸಿ ಮತ್ತು ಸಿಡಿಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿದರು.