ಹೂಟಗಳ್ಳಿಯ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ನೂತನ ಕಟ್ಟಡ ಹಾಗೂ ಶ್ರೀ ಘನಲಿಂಗ ಶಿವಯೋಗಿ ಸಭಾಭವನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಉದ್ಘಾಟಿಸಿದರು. ಸುತ್ತೂರು ಶ್ರೀ, ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಜಿ.ಟಿ. ದೇವೇಗೌಡ, ಕೆ. ವಿವೇಕಾನಂದ ಹಾಗೂ ಇತರರು ಇದ್ದರು.
ಮೈಸೂರು: ಸರ್ಕಾರದಿಂದ ಎಲ್ಲರಿಗೂ ಶಿಕ್ಷಣ ಒದಗಿಸಲು ಸಾಧ್ಯವಾಗದ ಸಂದರ್ಭದಲ್ಲಿ ಮಠಮಾನ್ಯಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸುತ್ತಿವೆ. ಅದರಲ್ಲೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುತ್ತಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಹೂಟಗಳ್ಳಿಯ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕಾಲೇಜಿನ ನೂತನ ಕಟ್ಟಡ ಹಾಗೂ ಶ್ರೀ ಘನಲಿಂಗ ಶಿವಯೋಗಿ ಸಭಾಭವನದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ಸುತ್ತೂರು ಮಠಕ್ಕೂ ನಮಗೂ ಅವಿನಾಭಾವ ಸಂಬಂಧವಿದೆ. ಇಂತಹ ಸಮಾರಂಭದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಉತ್ತರ ಪ್ರದೇಶದ ನೋಯ್ಡ, ದೆಹಲಿ ಹಾಗೂ ಜಮ್ಮು ಸೇರಿದಂತೆ ದೇಶದ ವಿವಿಧೆಡೆ ಮತ್ತು ಮಾರಿಷಸ್, ಅಮೆರಿಕ, ಮುಂಬೈ ಸೇರಿದಂತೆ ವಿವಿಧೆಡೆ ಜೆಎಸ್‌ಎಸ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಂಸ್ಥೆಗಳು ಅಪಾರ ಸೇವೆ ಸಲ್ಲಿಸುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಂಪ್ಯೂಟರ್ ಲ್ಯಾಬ್‌ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ, ಬಡವರು, ನಿರಾಶ್ರೀತರು ಹಾಗೂ ದೀನದಲಿತ ಮಕ್ಕಳಿಗೆ ಆಶ್ರಯ ನೀಡಿ ವಿದ್ಯಾವಂತರನ್ನಾಗಿ ಮಾಡುವ ಕಾರ್ಯವನ್ನು ಸುತ್ತೂರು ಮಠ ಮಾಡುತ್ತಿದೆ. ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿನ ಸಂಸ್ಥೆಗಳಲ್ಲಿ ಜ್ಞಾನಾರ್ಜನೆ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಸೂರ್ಯ, ಚಂದ್ರ ಇರುವವರೆಗೂ ಸುತ್ತೂರು ಮಠ ಹಾಗೂ ಅದರ ಶಿಕ್ಷಣ ಸಂಸ್ಥೆಗಳು ಇರಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ಎಂಬುದೇ ಒಂದು ಬ್ರಾಂಡ್ ಆಗಿದೆ. ಇಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕಾರವನ್ನೂ ಕಲಿಯುತ್ತಾರೆ ಎಂದು ಹೇಳಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಸುತ್ತೂರು ಮಠ ಕಾಮಧೇನುವಿನಂತೆ ನೆರವಾಗುತ್ತಿದ್ದು, ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುತ್ತಿದೆ. ಶಿಕ್ಷಣವು ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದು ಜೆಎಸ್‌ಎಸ್ ಸಂಸ್ಥೆಯ ಧ್ಯೇಯವಾಗಿದೆ ಎಂದು ಹೇಳಿದರು.
ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ದಶಕಗಳ ಹಿಂದೆ ಸಾಕ್ಷರತಾ ಪ್ರಮಾಣ ಕಡಿಮೆ ಇತ್ತು. ಇಂದು ಸಾಕ್ಷರತೆ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದ್ದು, ಇದರಲ್ಲಿ ಮಠಮಾನ್ಯಗಳು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಕೊಡುಗೆಯನ್ನೂ ಮರೆಯುವಂತಿಲ್ಲ ಎಂದರು.
ಸುತ್ತೂರು ಮಠದ ರಾಜೇಂದ್ರ ಶ್ರೀಗಳ ದೂರದೃಷ್ಟಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ನಡೆದಿವೆ. ವಿದ್ಯಾರ್ಥಿ ಗಳು ನಿರಂತರ ಶ್ರದ್ಧೆ, ಪರಿಶ್ರಮ ಹಾಗೂ ಕಲಿಕೆಯ ಮೂಲಕ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀರಂಗಪಟ್ಟಣದ ಬೇಬಿ ಚಂದ್ರವನ ಆಶ್ರಮದ ಶ್ರೀ ದುರ್ದುಂಡೇಶ್ವರ ಮಹಂತ ಶಿವಯೋಗಿಗಳ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ನಾಡಿನ ವೀರಶೈವ-ಲಿಂಗಾಯತ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದ್ದು, ಶಿಕ್ಷಣದ ಜತೆಗೆ ಸಂಸ್ಕೃತಿಯನ್ನೂ ಬೆಳೆಸುತ್ತಿವೆ. ಅನ್ನ, ಶಿಕ್ಷಣ, ಆಶ್ರಯ, ಆರೋಗ್ಯ ಹಾಗೂ ಅರಿವು ಎಂಬ ಪಂಚ ದಾಸೋಹಗಳ ಮೂಲಕ ಸುಸಂಸ್ಕೃತ ವಿದ್ಯಾರ್ಥಿಗಳನ್ನು ರೂಪಿಸುವ ಕಾರ್ಯವನ್ನು ಮಠಗಳು ಮಾಡುತ್ತಿವೆ ಎಂದರು.
ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಜೆಎಸ್‌ಎಸ್ ಸಂಸ್ಥೆಗಳು ಜ್ಞಾನ ದೇಗುಲಗಳಾಗಿದ್ದು, ಮನಸ್ಸನ್ನು ವಿಕಾಸಗೊಳಿಸಿಕೊಳ್ಳುವ ಮಂದಿರಗಳಾಗಿವೆ. ಜ್ಞಾನ ಸಂಪಾದನೆಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಅದಕ್ಕೆ ಯಾವುದೇ ಪರಿಧಿಯೂ ಇಲ್ಲ. ಅರಿವೇ ಗುರು ಎಂಬ ಸತ್ಯವನ್ನು ವಿಶ್ವವಿದ್ಯಾಲಯಗಳು ಸಾರುತ್ತಿವೆ. ರಾಜೇಂದ್ರ ಶ್ರೀಗಳ ಕೃಪೆಯಿಂದ ಇಂದು ವಿಶ್ವದಾದ್ಯಂತ ಜೆಎಸ್‌ಎಸ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.