ಜೆಎಸ್‌ಎಸ್ ಎಎಚ್‌ಇಆರ್‌ನ ಪ್ರೊ-ಚಾನ್ಸಲರ್ ಪ್ರೊ. ಬಿ.ಸುರೇಶ್ ಹಾಗೂ ಹೊಕ್ಕೈಡೊ ವಿಶ್ವವಿದ್ಯಾಲಯದ ಗ್ಲೋಬಲ್ ಫುಡ್ ರಿಸೋರ್ಸಸ್ ಪದವಿ ಅಧ್ಯಯನ ವಿಭಾಗದ ಡೀನ್ ಪ್ರೊ. ತೆರುಒ ಸೋನೆ ಮಂಗಳವಾರ ಸಹಿ ಹಾಕಿದರು. 
ಮೈಸೂರು

ಜೆಎಸ್‌ಎಸ್ ಎಎಚ್‌ಇಆರ್-ಜಪಾನ್ ವಿವಿ ನಡುವೆ ಒಪ್ಪಂದ

ಪ್ರೊ. ಬಿ.ಸುರೇಶ್, ಪ್ರೊ. ತೆಗುಒ ಸೋನಿ ಪರಸ್ಪರ ಸಹಿ

ಮೈಸೂರು: ಜೈವಿಕ ತಂತ್ರಜ್ಞ್ಞಾನ, ಆಹಾರ ವಿಜ್ಞಾನ ಹಾಗೂ ಕೃಷಿ ವಿಜ್ಞಾನ ಕ್ಷೇತ್ರಗಳಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಹಕಾರವನ್ನು ಬಲಪಡಿಸುವ ಉದ್ದೇಶದಿಂದ ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‌ಎಸ್ ಎಎಚ್‌ಇಆರ್) ಹಾಗೂ ಜಪಾನ್‌ನ ಹೊಕ್ಕೈಡೊ ವಿಶ್ವವಿದ್ಯಾಲಯದ ಗ್ಲೋಬಲ್ ಫುಡ್ ರಿಸೋರ್ಸಸ್ ಪದವಿ ಅಧ್ಯಯನ ವಿಭಾಗದ ನಡುವೆ ಮಹತ್ವದ ತಿಳಿವಳಿಕೆ ಒಪ್ಪಂದ (ಎಂಒಯು) ಏರ್ಪಟ್ಟಿದೆ.

ಈ ಸಂಬಂಧ ಒಪ್ಪಂದಕ್ಕೆ ಜೆಎಸ್‌ಎಸ್ ಎಎಚ್‌ಇಆರ್‌ನ ಪ್ರೊ-ಚಾನ್ಸಲರ್ ಪ್ರೊ. ಬಿ.ಸುರೇಶ್ ಹಾಗೂ ಹೊಕ್ಕೈಡೊ ವಿಶ್ವವಿದ್ಯಾಲಯದ ಗ್ಲೋಬಲ್ ಫುಡ್ ರಿಸೋರ್ಸಸ್ ಪದವಿ ಅಧ್ಯಯನ ವಿಭಾಗದ ಡೀನ್ ಪ್ರೊ. ತೆರುಒ ಸೋನೆ ಮಂಗಳವಾರ ಸಹಿ ಹಾಕಿದರು.

ಈ ಒಪ್ಪಂದದ ಮೂಲಕ ಎರಡೂ ಶಿಕ್ಷಣ ಸಂಸ್ಥೆಗಳು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಜಂಟಿ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಲಿವೆ. ಅಧ್ಯಾಪಕರ ವಿನಿಮಯ, ಉಪನ್ಯಾಸಗಳು, ಶೈಕ್ಷಣಿಕ ಚರ್ಚೆಗಳು ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ವಿನಿಮಯಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಪ್ರಾಯೋಗಿಕ ಕಲಿಕೆಯ ಅನುಭವ ಪಡೆಯಲು ಸಹಕಾರಿಯಾಗಲಿದೆ.

ಇದರೊಂದಿಗೆ ನೂತನ ಪಠ್ಯಕ್ರಮಗಳ ಅಭಿವೃದ್ಧಿ, ಜಂಟಿ ಶೈಕ್ಷಣಿಕ ಕಾರ್ಯಕ್ರಮಗಳು, ಸಂಶೋಧನಾ ಪ್ರಕಟಣೆಗಳು, ಶೈಕ್ಷಣಿಕ ಸಂಪನ್ಮೂಲಗಳು ಮತ್ತು ತರಬೇತಿ ಸಾಮಗ್ರಿಗಳ ಸಿದ್ಧತೆಗೂ ಒತ್ತು ನೀಡಲಾಗುತ್ತದೆ. ಅಂತರರಾಷ್ಟ್ರೀಯ ಸಮ್ಮೇಳನಗಳು, ವಿಚಾರ ಸಂಕಿರಣಗಳು ಹಾಗೂ ವೈಜ್ಞಾನಿಕ ಸಮಾವೇಶಗಳನ್ನು ಜಂಟಿಯಾಗಿ ಆಯೋಜಿಸುವ ಮೂಲಕ ಜಾಗತಿಕಮಟ್ಟದ ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡಲಾಗುತ್ತದೆ.

1876ರಲ್ಲಿ ಸಪ್ಪೊರೊ ಕೃಷಿ ಕಾಲೇಜಾಗಿ ಸ್ಥಾಪನೆಯಾದ ಹೊಕ್ಕೈಡೊ ವಿಶ್ವವಿದ್ಯಾಲಯವು 2026ರಲ್ಲಿ ತನ್ನ 150ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಏರ್ಪಟ್ಟಿರುವ ಒಪ್ಪಂದವು ಎರಡೂ ಸಂಸ್ಥೆಗಳ ನಡುವಿನ ಶೈಕ್ಷಣಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರ ಜತೆಗೆ, ಆಹಾರ ಸಂಪನ್ಮೂಲಗಳು, ಕೃಷಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ನವೀನ ಸಂಶೋಧನೆ ಹಾಗೂ ಅಂತಾರಾಷ್ಟ್ರೀಯ ಸಹಕಾರಕ್ಕೆ ಹೊಸ ಅವಕಾಶಗಳನ್ನು ತೆರೆದಿಡಲಿದೆ.