ಮೈಸೂರಿನ ರಂಗಾಯಣದ ಬಿ.ವಿ. ಕಾರಂತರ ರಂಗಚಾವಡಿಯಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಜಿ ಸಚಿವ ಬಿ.ಸೋಮಶೇಖರ್ ಪುಷ್ಪಾರ್ಚನೆ ನೆರವೇರಿಸಿದರು. ಹರಿಹರ ಆನಂದಸ್ವಾಮಿ, ದೇವಗಳ್ಳಿ ಸೋಮಶೇಖರ್, ಆರ್.ಲೋಕೇಶ್, ಗಿರೀಶ್ ಮಾಚಳ್ಳಿ ಹಾಗೂ ಇತರರು ಇದ್ದರು.
ಮೈಸೂರು: ಬಿಜೆಪಿ ಸೇರ್ಪಡೆಯೇ ನನ್ನ ಜೀವನದ ದೊಡ್ಡ ತಪ್ಪು ಎಂದು ಮಾಜಿ ಸಚಿವ ಬಿ.ಸೋಮಶೇಖರ್ ಹೇಳಿದರು.
ನಗರದ ರಂಗಾಯಣದ ಬಿ.ವಿ. ಕಾರಂತರ ರಂಗಚಾವಡಿಯಲ್ಲಿ ಚಾರ್ವಾಕ ಸಂಸ್ಥೆ ಆಯೋಜಿಸಿದ್ದ ಬೆಸುಗೆ ಕಾರ್ಯಕ್ರಮದಲ್ಲಿ ಭಾನುವಾರ ‘ಅಸ್ಪಶ್ಯರು ಆಳುವ ವರ್ಗ ವಾಗಬೇಕು ಎಂಬ ಕನಸನ್ನು ನನಸು ಮಾಡಲು ಎಡ-ಬಲ ಸಮುದಾಯಗಳ ಜವಾಬ್ದಾರಿಗಳು’ ವಿಷಯದ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ,
ನಾನು ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿಯೇ ಮಂತ್ರಿಯಾಗಿದ್ದೆ. ನಾಲ್ಕು ಬಾರಿ ಶಾಸಕನಾಗಿ ಸಮುದಾಯಕ್ಕಾಗಿ ದುಡಿದೆ. ಬಿಜೆಪಿಗೆ ಸೇರಿದ್ದು ನನ್ನ ಜೀವನದ ದೊಡ್ಡ ತಪ್ಪು. ಕೆಲವು ನಿರೀಕ್ಷೆಗಳೊಂದಿಗೆ ಆ ನಿರ್ಧಾರ ಕೈಗೊಂಡಿದ್ದೆ. ಬಿಜೆಪಿಯೊಳಗೆ ದಲಿತರು ಸ್ವತಂತ್ರವಾಗಿ ವಾತನಾಡಲು ಅವಕಾಶ ಇಲ್ಲ ಎಂದರು.
ಅಧಿಕಾರ, ಹುದ್ದೆ ಮತ್ತು ಸಂಪತ್ತು ಗಳಿಸಬಹುದು. ಆದರೆ ಸಮುದಾಯದ ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳಬಾರದು ಎಂಬ ಮನೋಭಾವ ರಾಜಕೀಯ ವ್ಯವಸ್ಥೆಯಲ್ಲಿ ಇದೆ. ಸಂವಿಧಾನದಲ್ಲಿ ಇರುವ ಹಕ್ಕುಗಳನ್ನು ಕೇಳಿದರೆ ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತ ಸಮುದಾಯದವರು ಶಿಕ್ಷಣ, ಉದ್ಯೋಗ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರುತ್ತಿದ್ದಾರೆ. ಆದರೆ, ರಾಜಕೀಯವಾಗಿ ವಿಫಲರಾಗುತ್ತಿದ್ದಾರೆ. ನಮ್ಮ ಮತಗಳಿಂದ ಇತರ ಪ್ರಬಲ ಸಮುದಾಯಗಳು ಮುಖ್ಯಮಂತ್ರಿ, ಪ್ರಧಾನಿ ಆಗುತ್ತಿದ್ದಾರೆ. ಆದರೆ ನಮ್ಮ ಸಮುದಾಯದ ನಾಯಕರನ್ನು ಅಧಿಕಾರದ ಕೇಂದ್ರಕ್ಕೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
1950ರ ದಶಕದಿಂದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಸೇರಿದಂತೆ ಹಲವು ನಾಯಕರು ವೈಯಕ್ತಿಕ ಹಿತಾಸಕ್ತಿಗಿಂತ ಆರ್‌ಎಸ್‌ಎಸ್ ಸಂಘಟನೆಯ ಗುರಿಯನ್ನು ಮುಂದಿಟ್ಟುಕೊಂಡು ಕೆಲಸ ಮಾಡಿದರು. ಅವರು ತಮ್ಮ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಸೈದ್ಧಾಂತಿಕ ನಿಲುವಿನ ವಿಚಾರದಲ್ಲಿ ಒಗ್ಗಟ್ಟನ್ನು ಉಳಿಸಿಕೊಂಡರು. ಹೀಗಾಗಿ ಅವರನ್ನು ದೇಶದ ಆಡಳಿತ ಹಿಡಿದರು. ಆದರೆ, ದಲಿತ ಸಂಘಟನೆಗಳು ವೈಯಕ್ತಿಕ ಹಿತಾಸಕ್ತಿಯಿಂದ ಸಂಘಟಿತರಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.