ಬೆಟ್ಟದಪುರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಆಯೋಜಿಸಿದ್ದ ವನ ಮಹೋತ್ಸವ, ಶಾರದಾ ಪೂಜೆ, ಪಾಲಕರ ಸಭೆ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. 
ಮೈಸೂರು

ಸರ್ಕಾರಿ ಶಾಲೆಗಳ ಉಳಿವಿಗೆ ಕೈಜೋಡಿಸಿ

ನಾಗೇಶ ಎಸ್
ಬೆಟ್ಟದಪುರ: ಸರ್ಕಾರಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಉಳಿವಿಗೆ ಸಮಾಜ ಸೇವಕರು, ದಾನಿಗಳು, ಉದ್ಯಮಿಗಳು ಮತ್ತು ಸಾರ್ವಜನಿಕರು ಕೈಜೋಡಿಸಬೇಕು ಎಂದು ಬೆಟ್ಟದಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಪ್ರಾಂಶುಪಾಲ ಸೋಮಶೇಖರ್ ಮನವಿ ಮಾಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವನ ಮಹೋತ್ಸವ, ಶಾರದ ಪೂಜೆ, ಪಾಲಕರ ಸಭೆ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ತರಬೇತಿ ನೀಡಲಾಗುತ್ತಿದ್ದು, ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ವಿವಿಧ ನಗರಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಶೇ.100ರಷ್ಟು ಫಲಿತಾಂಶ ದಾಖಲಿಸಿರುವ ಕಾಲೇಜಿನಲ್ಲಿ ಈಗಾಗಲೇ ಐದು ಕೋರ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನಷ್ಟು ಹೊಸ ಕೋರ್ಸ್‌ಗಳನ್ನು ಆರಂಭಿಸಲು ಹೆಚ್ಚುವರಿ ಕೊಠಡಿಗಳು ಹಾಗೂ ಮೂಲ ಸೌಕರ್ಯಗಳ ಅಗತ್ಯವಿದೆ. ಆದ್ದರಿಂದ ಸಮಾಜ ಸೇವಕರು, ದಾನಿಗಳು, ಉದ್ಯಮಿಗಳು ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬೆಟ್ಟದಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಟರಾಜ್ ಮಾತನಾಡಿ, ಐಟಿಐ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದ್ದು, ತಾಂತ್ರಿಕ ಶಿಕ್ಷಣದಿಂದ ಉನ್ನತ ಮಟ್ಟದ ಉದ್ಯೋಗ ಹಾಗೂ ಸಾಧನೆ ಸಾಧ್ಯವಾಗುತ್ತದೆ. ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಖಚಿತ ಎಂದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಮಧುಸೂದನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ಪಾಂಡು, ಬೆಟ್ಟತುಂಗ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಮಚಂದ್ರ, ಚಾಣಕ್ಯ ಎಜುಕೇಶನ್ ಟ್ರಸ್ಟ್‌ನ ಮುಖ್ಯಶಿಕ್ಷಕ ತಿಮ್ಮಯ್ಯ ಸೇರಿದಂತೆ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.