ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಣ್ಯರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಎಂ.ಹರ್ಷಿತಾ, ಎಚ್.ಎಸ್ ರವಿ, ವಿಲಾಸರಾವ ಪವಾರ, ಮಮತಾ, ಅನಿಲ್ ಇತರರು ಇದ್ದರು.
- ವೈದ್ಯಾಧಿಕಾರಿ ಡಾ.ಎಂ. ಹರ್ಷಿತಾ ಸಲಹೆ
ಬೆಟ್ಟದಪುರ: ಇಂದಿನ ಕಾಲದಲ್ಲಿ ಪರಿಸರ ಸಂರಕ್ಷಣೆ ತುಂಬ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದರ ಪೋಷಣೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಹರ್ಷಿತಾ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮರಗಳು ಪರಿಸರದ ಸಮತೋಲನವನ್ನು ಕಾಪಾಡುವುದರ ಜತೆಗೆ ಶುದ್ಧಗಾಳಿ, ಉತ್ತಮ ಆರೋಗ್ಯ ಮತ್ತು ಜೀವ ವೈವಿಧ್ಯದ ಸಂರಕ್ಷಣೆಗೆ ಪ್ರಮುಖ ಆಧಾರವಾಗಿವೆ. ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಟ್ಟು ಅವುಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್ ರವಿ, ಉಪ ವಲಯ ಅರಣ್ಯಾಧಿಕಾರಿ ವಿಲಾಸರಾವ ಪವಾರ, ಪ್ರಾಥಮಿಕ ಆರೋಗ್ಯ ಸುರಕ್ಷಿತಾಧಿಕಾರಿ ಮಮತಾ, ಸಮುದಾಯ ಆರೋಗ್ಯಾಧಿಕಾರಿ ಅನಿಲ್, ಗಸ್ತು ಅರಣ್ಯ ಪಾಲಕ ಶರಣಪ್ಪ ಕಾರಭಾರಿ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.