ಹುಣಸೂರಲ್ಲಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿರುವ ಉದ್ಯೋಗ ಮೇಳದ ಪೋಸ್ಟರ್‌ಅನ್ನು ಯದು ಜತವಧನ್, ನಿಖಿಲ್ ಜೈನ್, ಆನಂದ್ ಬಿಡುಗಡೆಗೊಳಿಸಿದರು.
ಹುಣಸೂರು: ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ 59ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮೇ 23ರ ಶನಿವಾರ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ವಿಷನ್ ಅಸ್ರ ಇ.ವಿ.ಅಕಾಡೆಮಿ ಸಿಇಒ ನಿಖಿಲ್ ಜೈನ್ ತಿಳಿಸಿದರು.
ಸ್ನೇಹಜೀವಿ ಬಳಗದ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಮೇಳ ಆಯೋಜಿಸಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಪಡೆದಿರುವ ನಿರುದ್ಯೋಗಿ ಯುವಕ, ಯುವತಿಯರು ಇದರ ಪ್ರಯೋಜನ ಪಡೆಯಬಹುದು. ಹುಣಸೂರು, ಕೆ.ಆರ್.ನಗರ, ಎಚ್.ಡಿ.ಕೋಟೆ, ಪಿರಿಯಪಟ್ಟಣ ತಾಲೂಕುಗಳ 18ರಿಂದ 30 ವರ್ಷದ ಪುರುಷರು, 18ರಿಂದ 25 ವಯಸ್ಸಿನ ಮಹಿಳೆಯರು ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಷನ್ ಅಸ್ರ ಇ.ವಿ.ಅಕಾಡೆಮಿ ಅಧ್ಯಕ್ಷ ಯದು ಜತವಧನ್ ಮಾತನಾಡಿ, ಟಿವಿಎಸ್ ಕಂಪನಿಯಲ್ಲಿ 1,500ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶವಿದೆ. ಹುಣಸೂರಿನಲ್ಲಿ ನಡೆಯುವ ಉದ್ಯೋಗ ಮೇಳದಲ್ಲಿ ಮೈಸೂರು ಜಿಲ್ಲೆಯ ಯಾವುದೇ ಭಾಗದ ನಿರುದ್ಯೋಗಿಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಆರ್.ಆನಂದ್, ಕಾರ್ಯದರ್ಶಿ ಸಚ್ಚಿನ್ ಪ್ರಕಾಶ್, ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಎಚ್.ಎಸ್ ಕುಮಾರ್ ಇದ್ದರು. ಇದೇ ವೇಳೆ ಉದ್ಯೋಗ ಮೇಳ ಕುರಿತ ಪೋಸ್ಟರ್‌ಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.