- ತಾಪಂ ಇಒ ಡಿ.ಬಿ.ಸುನಿಲ್ ಕುಮಾರ್ ಮಾಹಿತಿ
ಪಿರಿಯಾಪಟ್ಟಣ:
ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಅಜೀವಿಕ ಮಿಷನ್ ಯೋಜನೆಯಡಿ ಗ್ರಾಮೀಣ ಜನರಿಗೆ ಅಕುಶಲ ಕೆಲಸವನ್ನು ಒದಗಿಸುವ ಉದ್ದೇಶದಿಂದ ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಜಾಬ್ ಕಾರ್ಡ್ ಮೇಳವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ.ಬಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳು ನಡೆಯದೆ ಉದ್ಯೋಗವಕಾಶಗಳು ಕಡಿಮೆಯಾಗುತ್ತಿದ್ದು, ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಐಇಸಿ ಚಟುವಟಿಕೆಯಡಿ ಮನೆ, ಮನೆಗೆ ಭೇಟಿ ನೀಡಿ ಜಾಬ್ ಕಾರ್ಡ್ ಮೇಳ ನಡೆಸಲಾಗುತ್ತಿದ್ದು, ತಮ್ಮ ಜಾಬ್ ಕಾರ್ಡ್ ಕಾಲಾವಧಿ ಮುಗಿದಿದ್ದರೆ ವಿಬಿ ಜಿ ರಾಮ್ ಜಿಯಲ್ಲಿ ಹೊಸದಾಗಿ ಜಾಬ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ, ಗ್ರಾಮಸ್ಥರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಜಾಬ್ ಕಾರ್ಡ್ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.
ವಿಬಿ ಜಿ ರಾಮ್ ಜಿ ಯೋಜನೆಯಡಿ ಒಂದು ಆರ್ಥಿಕ ಕುಟುಂಬಕ್ಕೆ 125 ದಿನ ಮಾನವ ದಿನಗಳು ಸೃಜನೆಯಾಗಲಿದ್ದು, ಕೂಲಿ ಮೊತ್ತ 382 ರೂ. ದೊರೆಯಲಿದೆ. ಒಟ್ಟಾರೆ ಆರ್ಥಿಕ ವರ್ಷದಲ್ಲಿ 47,750 ರೂ.ಗಳನ್ನು ಈ ಯೋಜನೆಯಡಿ ಪಡೆಯಬಹುದಾಗಿದೆ. ಗ್ರಾಮಸ್ಥರು ತಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ, ಗ್ರಾಮೀಣ ಭಾಗದಲ್ಲಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಉದ್ಯೋಗ ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.