ರೈಲಿನಲ್ಲಿ ಕಳವಾಗಿದ್ದ ಚಿನ್ನಾಭರಣಗಳನ್ನು ಮೈಸೂರು ರೈಲ್ವೆ ಪೊಲೀಸರು ಪತ್ತೆ
- ರೈಲ್ವೇ ಪೊಲೀಸರ ಕಾರ್ಯಾಚರಣೆ
- ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಚಿನ್ನಾಭರಣ ಕಳವು ಮಾಡಿರುವುದು ಪತ್ತೆ
- ತಕ್ಷಣ ಇಬ್ಬರನ್ನು ಬಂಧಿಸಿ ಚಿನ್ನಾಭರಣಗಳನ್ನು ಮಾಲೀಕರಿಗೆ ಸುಪರ್ದಿಗೆ
ಮೈಸೂರು: ದೂರು ದಾಖಲಾದ ಎರಡೇ ತಾಸಿನಲ್ಲೇ ರೈಲಿನಲ್ಲಿ ಕಳವಾಗಿದ್ದ ಚಿನ್ನಾಭರಣಗಳನ್ನು ಮೈಸೂರು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳ್ಳತನ ಮಾಡಿದ್ದ ಇಬ್ಬರು ರೈಲ್ವೆ ಗುತ್ತಿಗೆ ನೌಕರರನ್ನೂ ಬಂಧಿಸಿದ್ದಾರೆ.
ರೈಲ್ವೆ ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ರಯೊಣಿಕರೊಬ್ಬರು ಕಳೆದುಕೊಂಡಿದ್ದ 3.2 ಲಕ್ಷ ರೂ. ಮೊತ್ತದ ಚಿನ್ನಾಭರಣ ದೊರೆತಿದೆ. ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿದ್ದ ಉತ್ತರಪ್ರದೇಶ ಮೂಲದ ಅಮ್ಜದ್(21), ಇಬ್ರಾನ್(26) ಬಂಧಿತರು.
ಪ್ರವಾಸಕ್ಕಾಗಿ ಉತ್ತರ ಪ್ರದೇಶದ ವಾರಾಣಸಿಯ ಸತ್ಯಜಿತ್ ಅವರು ಕುಟುಂಬ ಸಮೇತ ಮೈಸೂರಿಗೆ ಡಿ.26ರಂದು ಬಂದಿದ್ದರು. ರೈಲ್ವೆ ನಿಲ್ದಾಣದಿಂದ ತೆರಳುವಾಗ ಚಿನ್ನಾಭರಣವಿದ್ದ ಬ್ಯಾಗನ್ನು ಅಲ್ಲಿಯೇ ಮರೆತು ಹೋಗಿದ್ದರು. ಮತ್ತೆ ವಾಪಸ್ ನಿಲ್ದಾಣಕ್ಕೆ ಬಂದು ಹುಡುಕಾಟ ನಡೆಸಿದರೂ ಬ್ಯಾಗ್ ದೊರೆತಿರಲಿಲ್ಲ.
ಈ ಕುರಿತು ಮೈಸೂರು ರೈಲ್ವೆ ಪೊಲೀಸರಿಗೆ ದೂರು ಕೊಟ್ಟಿದ್ದರು. ದೂರು ದಾಖಲಿಸಿಕೊಂಡ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿದರು.
ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಚಿನ್ನಾಭರಣ ಕಳವು ಮಾಡಿರುವುದು ಪತ್ತೆಯಾಯಿತು. ತಕ್ಷಣ ಇಬ್ಬರನ್ನು ಬಂಧಿಸಿ ಚಿನ್ನಾಭರಣಗಳನ್ನು ಮಾಲೀಕರಿಗೆ ಸುಪರ್ದಿಗೆ ನೀಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.