ತಿ.ನರಸೀಪುರದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಲಿರುವ ಹಡಪದ ಅಪ್ಪಣ್ಣ ಜಯಂತಿ ಮತ್ತು ಸ್ವಾತಂತ್ರ್ಯ ದಿನಾಚರಣೆ ಪೂರ್ವ ಸಿದ್ಧತಾ ಸಭೆಯಲ್ಲಿ ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಮಾತನಾಡಿದರು. ತಾಪಂ ಪ್ರಭಾರ ಇಒ ಡಾ.ಕೆ.ರಂಗಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ಗ್ರೇಡ್-2 ತಹಸೀಲ್ದಾರ್ ರಾಜಾಕಾಂತ್, ಸಿಡಿಪಿಒ ಗೋವಿಂದರಾಜು ಇದ್ದರು.
ತಿ.ನರಸೀಪುರ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆ.4ರಂದು ಹಡಪದ ಅಪ್ಪಣ್ಣ ಜಯಂತಿ ಮತ್ತು 15ರಂದು ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲು ವಿವಿಧ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಸಮುದಾಯಗಳ ಸಹಕಾರದೊಂದಿಗೆ ತಾಲೂಕು ಕಚೇರಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ನೆರವೇರಿಸಲು ನಿರ್ಧರಿಸಲಾಗಿದೆ. ಆ. 15ರಂದು ವಿದ್ಯೋದಯ ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಾರೋಹಣ ನಡೆಸಲಾಗುವುದು ಎಂದು ವಿವರಿಸಿದರು.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ. ಮರಯ್ಯ ಮಾತನಾಡಿ, ಸರ್ಕಾರದ ಶಿಷ್ಟಾಚಾರದಂತೆ ಎಲ್ಲ ಇಲಾಖೆಗಳ ಸಹಕಾರ ಪಡೆದು ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಭಾಗವಹಿಸುವಂತೆ ಮಾಡಬೇಕು ಎಂದರು.
ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಅವರ ಸಾಧನೆಯನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.
ಬಾಬು ಜಗಜೀವನರಾಮ್ ಸಂಘದ ಮಾಜಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಸರ್ಕಾರಿ ಶಾಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ನೀಡುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಒಲವು ಮೂಡಿಸಬೇಕು. ಅವುಗಳ ಉಳಿವಿಗೂ ಉತ್ತೇಜನ ದೊರಕುವಂತೆ ಮಾಡಬೇಕು ಎಂದರು.
ತಾಪಂ ಪ್ರಭಾರ ಇಒ ಡಾ. ಕೆ. ರಂಗಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ, ಗ್ರೇಡ್-2 ತಹಸೀಲ್ದಾರ್ ರಾಜಾಕಾಂತ್, ಸಿಡಿಪಿಒ ಗೋವಿಂದರಾಜು, ಬನ್ನೂರು ಪುರಸಭೆ ಮುಖ್ಯಾಧಿಕಾರಿ ಸತೀಶ್, ತಲಕಾಡು ಟೌನ್ ಪಂಚಾಯಿತಿ ಮುಖ್ಯಾಧಿಕಾರಿ ಪಂಚಲಿಂಗಪ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕಿ ಶಾಂತಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಜಣ್ಣ, ಸೆಸ್ಕ್ ಎಇಇಗಳಾದ ಕೆ.ವಿ. ವೀರೇಶ್, ಹರ್ಷನ್, ಕಾರ್ಮಿಕ ಸಂಘದ ಆಲಗೂಡು ಪುಟ್ಟಮಲ್ಲಯ್ಯ, ಹುಣಸೂರು ಪುಟ್ಟಯ್ಯ, ನಾಗೇಂದ್ರ, ಮಾದಾಪುರ ಸಿದ್ದೇಶ್, ಕೋಮಲಾ, ಶ್ವೇತಾ, ಎನ್.ಕೆ. ಕೆಂಪರಾಜು, ಡಾ. ಮಲ್ಲಿಕಾರ್ಜುನ ಸ್ವಾಮಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.