ಸರಗೂರು ತಾಲೂಕಿನ ಇಟ್ನ ಮತ್ತು ಹಾಲುಗಡ ಗ್ರಾಮದಲ್ಲಿ ಚಿಕ್ಕ ದೇವಮ್ಮನ ದೇವಸ್ಥಾನ.
ಮಾ.19 ರಂದು ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಚಿಕ್ಕದೇವಮ್ಮನ ಬೆಟ್ಟದಿಂದ ಅಮ್ಮನವರ ಉತ್ಸವಮೂರ್ತಿಯನ್ನು ತಂದು ಹಾಲುಗಡದ ಜಪದಕಟ್ಟೆಯಲ್ಲಿ ಇಟ್ಟು ಪೂಜಿಸಲಾಗುವುದು. ನಂತರ ಭಕ್ತರು ಜಪ್ಪದಕಟ್ಟೆಯಲ್ಲಿನ ಚಿಕ್ಕದೇವಮ್ಮ ನಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರಿಗೆ ಹರಕೆ ತೀರಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಅಮ್ಮನವರನ್ನು ಗೂಳಿ ಮಂಟಪದಲ್ಲಿ ಕೂರಿಸಿ ಪೂಜಿಸಿದ ಬಳಿಕ ಹಾಲಿನ ಮಂಟಪದಲ್ಲಿ ಪೂಜಿಸಲಾಗುವುದು.
ಸಂಜೆ 4ಕ್ಕೆ ಉತ್ಸವಮೂರ್ತಿಯನ್ನು ಹಾಲುಗಡದಿಂದ ಇಟ್ನ ಗ್ರಾಮಕ್ಕೆ ವಾದ್ಯಗೋಷ್ಠಿಗಳೊಂದಿಗೆ ತಂದು ಮಠದ ಹೊಲದ ಮಂಟಪ ದಲ್ಲಿ ಪೂಜಿಸಲಾಗುವುದು. ರಾತ್ರಿ 9ಕ್ಕೆ ಚಿಕ್ಕದೇವಮ್ಮ ಅಮ್ಮನವರನ್ನು ಕುದುರೆಯ ರಥದ ಮೇಲೆ ಕೂರಿಸಿ ಹೂವಿನಿಂದ ಅಲಂಕರಿಸಿ ವಿವಿಧ ಕಲಾತಂಡಗಳ ಸಮೇತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಮಾ.೨೦ರಂದು ಮುಂಜಾನೆ ೪ಕ್ಕೆ ಬಾಣ ಬಿರುಸುಗಳ ಸಮೇತ ವಿಶೇಷ ಪೂಜೆ ಸಲ್ಲಿಸಲಾಗುವುದು. ಬಳಿಕ ಮಾರಮ್ಮನ ದೇವಸ್ಥಾನದಲ್ಲಿ ಪೂಜಿಸಲಾಗುವುದು.
ಬೆಳಿಗ್ಗೆ 8ಕ್ಕೆ ಚಿಕ್ಕದೇವಮ್ಮ ಅಮ್ಮನವರಿಗೆ ಕಪಿಲ ನದಿಯಲ್ಲಿ ತೀಥೋತ್ಸವ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ವಿಽ-ವಿಧಾನ ನೆರವೇರಿಸಲಾಗುವುದು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಮತ್ತೆ ಮಠದ ಹೊಲದ ಮಂಟಪದಲ್ಲಿ ಪೂಜಿಸಲಾಗುವುದು. ರಾತ್ರಿ 9ಕ್ಕೆ ‘ಅಣ್ಣನ ಅರಮನೆ’ ಅಥವಾ ‘ಕಲಿಯುಗದ ಅರ್ಜುನ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ಮಾ.21ರಂದು ಚಿಕ್ಕದೇವಮ್ಮನಿಗೆ ವಿಶೇಷ ಪೂಜೆ ಮುಗಿಸಿ, ಮಧ್ಯಾಹ್ನ 12ಕ್ಕೆ ಇಟ್ನ ಗ್ರಾಮ ದಿಂದ ಹೊರಟು ಹಾಲುಗಡದ ಜಪದಕಟ್ಟೆಯಲ್ಲಿ ಎಡೆಪೂಜೆ, ತಳಿಗೆ ಪೂಜೆ, ಮಹಾಮಂಗಳಾರತಿ ಮಾಡಲಾಗುವುದು. ಬಳಿಕ ದೇವಿಯ ಮೂರ್ತಿ ಬೆಟ್ಟಕ್ಕೆ ಹೊರಡಲಿದೆ.
ಭಕ್ತರಿಗೆ ಕಪಿಲ ನದಿ ಸಮೀಪದಲ್ಲಿ ಮೂರು ದಿನಗಳ ಕಾಲ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ. ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ, ಜಾ.ದಳ ಮುಖಂಡ ಕೆ.ಎಂ.ಕೃಷ್ಣನಾಯಕ, ಉದ್ಯಮಿ ಎನ್.ಬೆಳ್ತೂರು ನಿಂಗರಾಜು, ಇಟ್ನ ಗ್ರಾಮದ ದೇವಾಲಮ್ಮ ಬೊಂಡನಚಿನ್ನನಾಯಕ ಅನ್ನದಾನ ಸೇವಾರ್ಥದಾರರಾಗಿದ್ದಾರೆ.
ಚಿಕ್ಕದೇವಮ್ಮನ ಜಾತ್ರೆ ಕಮಿಟಿ ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಯಕ, ಎನ್.ಬಸವನಾಯಕ, ಯಜಮಾನರಾದ ಬಿ.ಬೆಟ್ಟನಾಯಕ, ಚಿನ್ನನಾಯಕ, ತಮ್ಮರಾಜು, ಡೈರಿ ಬೆಟ್ಟನಾಯಕ, ಅನಿಲ್, ಕಾಳಿಂಗನಾಯಕ, ಸಣ್ಣಸ್ವಾಮಿನಾಯಕ, ಐಬಿ ರವಿಕುಮಾರ್, ಜಯರಾಮ್, ನಾಗೇಂದ್ರ, ಸೋಮಣ್ಣ, ಚಿಕ್ಕಣ್ಣ, ಬಿ.ಬಸವರಾಜು ಸೇರಿದಂತೆ ಹಾಲುಗಡ ಹಾಗೂ ಇಟ್ನ ಗ್ರಾಮಗಳವರು ಜಾತ್ರೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಬಸ್ ವ್ಯವಸ್ಥೆ: ಮೂರು ದಿನಗಳ ಕಾಲ ನಡೆಯುವ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವಕ್ಕೆ ಮೈಸೂರು, ಕೋಟೆ, ಸರಗೂರಿನಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಲ್ಲದೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಯಾವುದೇ ಅಹಿಕತರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಇಟ್ನ ಜಯರಾಮ್, ಡೈರಿ ಬೆಟ್ಟನಾಯಕ ತಿಳಿಸಿದರು