ಮೈಸೂರು: ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ವತಿಯಿಂದ ಫೆ.18ರಿಂದ 25ರವರೆಗೆ ಜಪಾನ್- ಭಾರತ ಶೈಕ್ಷಣಿಕ ವಿನಿಮಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಫೆ.18ರಂದು ಬೆಳಗ್ಗೆ 10ಕ್ಕೆ ಕ್ಯಾಂಪಸ್ ಆವರಣದಲ್ಲಿನ ಐಆರ್‌ಐ ಭವನದಲ್ಲಿ ಉದ್ಘಾಟನೆ ನೆರವೇರಲಿದೆ ಎಂದು ಪ್ರಾಂಶುಪಾಲ ಡಾ.ಸಿ.ನಟರಾಜ್ ತಿಳಿಸಿದರು.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟ್‌ಸೂರ್‌ಮಠ್, ಸಮಕುಲಾಧಿಪತಿ ಡಾ.ಬಿ.ಸುರೇಶ್, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ತೆರೊ ಸೊನೆ, ಡಾ.ಎ.ಎನ್.ಸಂತೋಷ್‌ಕುಮಾರ್ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
8 ದಿನಗಳ ಈ ಕಾರ್ಯಕ್ರಮದಲ್ಲಿ ಒಟ್ಟು 35 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಆಹಾರ ವ್ಯವಸ್ಥೆ, ಪರಿಸರ ಸುಸ್ಥಿರತೆ, ಕೃಷಿ ಮತ್ತು ಮಾನವ ಆರೋಗ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚರ್ಚೆ, ಪ್ರಯೋಗಾಲಯ ಪರಿಚಯ, ಕ್ಷೇತ್ರ ಭೇಟಿ, ಸಂಯುಕ್ತ ಸಮ್ಮೇಳನಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ಡಾ.ಕಾರ್ತಿಕ, ಪ್ರೊ.ಮಲ್ಲು ಇದ್ದರು.