ಜಾನಕಿ ಅವರ ಪಾರ್ಥಿವ ಶರೀರ 
ಮೈಸೂರು

ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಜಾನಕಿ ಅಂತ್ಯಕ್ರಿಯೆ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ನೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದ ಅಭಿಮಾನಿಗಳು
ಖ್ಯಾತ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕು ಕಣಿಯನಹುಂಡಿ ಗ್ರಾಮದಲ್ಲಿನ ಆಪ್ತ ಅಭಿಮಾನಿ ನವೀನ್ ಅವರ ಜಮೀನಿನಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಸರ್ಕಾರದ ಸಕಲ ಗೌರವದೊಂದಿಗೆ ಭಾನುವಾರ ನಡೆಯಿತು.
ಸಿನಿಮಾ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ರಾಜಕೀಯ ನಾಯಕರು, ಎಸ್.ಜಾನಕಿ ಅಭಿಮಾನಿಗಳು ಸೇರಿ ಸಾವಿರಾರು ಜನರು ಪಾಲ್ಗೊಂಡು ನೆಚ್ಚಿನ ಗಾಯಕಿಗೆ ಅಂತಿಮ ನಮನ ಸಲ್ಲಿಸಿದರು.
ಶ್ರೀರಂಗಪಟ್ಟಣದ ಪುರೋಹಿತರಾದ ರಮೇಶ್ ಶರ್ಮಾ ನೇತೃತ್ವದ 10 ಪುರೋಹಿತರ ತಂಡವು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿತು.
ಸಂಜೆ 5.36 ಗಂಟೆ ಸುಮಾರಿನಲ್ಲಿ ಮೊಮ್ಮಗಳಾದ ಅಪ್ಸರಾ ಮೃತರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಅವರ ಸಂಬಂಧಿಕರರಾದ ಸೊಸೆ ಉಮಾ, ಗಣೇಶ್ ಹಾಗೂ ಸಾಕು ಮಗ ನವೀನ್ ಕೂಡ ಕೈ ಜೋಡಿಸಿದರು.
ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಆಗುತ್ತಿದ್ದಂತೆ ಅಭಿಮಾನಿಗಳು 'ಜಾನಕಿ ಅಮ್ಮನಿಗೆ ಜೈ', 'ಜೈ' ‘ಅಮರ್ ರಹೇ ಜಾನಕಿ ಅಮ್ಮ’, ‘ಅಮರ್ ರಹೇ ಜಾಣಕಿ ಅಮ್ಮ ’, ‘ಅಮರ್ ರಹೇ’ ಎಂಬ ಘೋಷಣೆ ಕೂಗಿದರು.
ಆ ಮೂಲಕ ಜೀವನದ ಗಾನ ಮುಗಿಸಿದ ಸಿರಿ ಕಠದ ಗಾಯಕಿ ಎಸ್.ಜಾನಕಿ ಪಂಚಭೂತಗಳಲ್ಲಿ ಲೀನವಾದರು.

ಸರ್ಕಾರದಿಂದ ಗೌರವ ಸಲ್ಲಿಕೆ:

ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ‌.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಟಿ.ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪ ಅಮರ್ನಾಥ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್, ಅಪರ ಆರ್.ಐಶ್ವರ್ಯ, ಚನಲಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಮತ್ತಿತರರು ಪಾರ್ಥಿವ ಶರೀರಕ್ಕೆ ಪುಷ್ಪ ಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ನಂತರ ಖಡ್ಗದಾರಿಯಾಗಿ ಆರ್ ಪಿ ಐ ದೇವಿಪ್ರಸಾದ್ ನೇತೃತ್ವದಲ್ಲಿ 10 ಮಂದಿ ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಜತೆಗೆ ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆ ನುಡಿಸಿತು. ಈ ವೇಳೆ ಬಹುತೇಕರು ಜಾನಕಿ ಅವರಿಗೆ ನಮಿಸಿ ಕಣ್ಣೀರಾದರು. ಮೃತದೇಹ ಒಯ್ಯುವಾಗ ಹೆಗಲು ಕೊಟ್ಟರು. ಕುಟುಂಬದವರು ಅಪರ ಕರ್ಮ ವಿಧಾನಗಳನ್ನು ನೆರವೇರಿಸಿ ಕಣ್ಣೀರು ಹಾಕುತ್ತಾ ವಿದಾಯ ಹೇಳಿದರು.
ನಟಿ‌ ಭಾರತಿ ವಿಷ್ಣುವರ್ಧನ್, ಹಂಸಲೇಖ, ರಾಕ್ ಲೈನ್ ವೆಂಕಟೇಶ್, ಗಾಯಕಿ ಅರ್ಚನಾ ಉಡುಪ, ಬ್ರಾಹ್ಮಂಡ ಗುರೂಜಿ, ಕೇರಳದ ಮಾರ್ತೋಮ ಚರ್ಚ್ ನ ಫಾದರ್ ಪೌಲ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಇತರರಿದ್ದರು.