- ಚೆಲುವಾಂಬ ಆಸ್ಪತ್ರೆಯಲ್ಲಿ ಆರಂಭವಾಗಲಿದೆ ಕೃತಕ ಗರ್ಭಧಾರಣೆ ಕೇಂದ್ರ
- ಬಡ, ಮಧ್ಯಮ ವರ್ಗದ ದಂಪತಿಗೆ ಅನುಕೂಲ
ಇನ್‌ವಿಟ್ರೊ ಫರ್ಟಿಲೈಸೇಷನ್(ಐವಿಎಫ್) ಮೂಲಕ ಗರ್ಭಧಾರಣೆ ಬಯಸುವವರಿಗೆ ಇಲ್ಲೊಂದಿದೆ ಸಿಹಿ ಸುದ್ದಿ...!
ಖಾಸಗಿ ಐವಿಎಫ್ ಕೇಂದ್ರಗಳಲ್ಲಿ ಅಪಾರ ಹಣ ವ್ಯಯಿಸಬೇಕಿದೆ. ಇದನ್ನು ಮನಗಂಡಿರುವ ಸರ್ಕಾರ ಮೈಸೂರಿನಲ್ಲೂ ಐವಿಎಫ್ ಕೇಂದ್ರ ಸ್ಥಾಪಿಸಲು ಮುಂದಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ಅಥವಾ ಎರಡು ತಿಂಗಳಲ್ಲಿ ಚೆಲುವಾಂಬ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸೇವೆ ಆರಂಭಿಸಲಿದೆ.
ಕೃತಕ ಗರ್ಭಧಾರಣೆ ಕೇಂದ್ರ ಆರಂಭಿಸಲು ಜಾಗ ಗುರುತಿಸಿರುವುದಲ್ಲದೆ ಕೇಂದ್ರದ ಕಟ್ಟಡವೂ ಪೂರ್ಣಗೊಂಡಿದೆ. ಕೇಂದ್ರಕ್ಕೆ ಅಗತ್ಯವಾದ ಉಪಕರಣಗಳ ಖರೀದಿ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಮೊದಲು ಎರಡು ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ, ತಾಂತ್ರಿಕ ಕಾರಣದಿಂದ ಅದು ರದ್ದಾಗಿ ಇದೀಗ ಮೂರನೇ ಬಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಶೀಘ್ರದಲ್ಲೇ ಉಪಕರಣಗಳ ಅಳವಡಿಕೆ ಶುರುವಾಗಲಿದೆ. ಅಂತೆಯೇ ಬಂಜೆತನದಿಂದ ಬಳಲುವವರಿಗೆ ಕೈಗೆಟಕುವ ದರದಲ್ಲಿ ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಸೇವೆ ದೊರೆಯಲಿದೆ.
2023ರ ಬಜೆಟ್‌ನಲ್ಲಿ ಬೆಂಗಳೂರು, ಮೈಸೂರು, ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ವಿಶೇಷ ಕೇಂದ್ರಗಳನ್ನು ಆರಂಭಿಸುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಮೈಸೂರಿನಲ್ಲಿ ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರದಡಿ(ಎಂಎಂಸಿ ಆ್ಯಂಡ್ ಆರ್‌ಐ) 2.50 ಕೋಟಿ ರೂ.ವೆಚ್ಚದಲ್ಲಿ ಸರ್ಕಾರಿ ಐವಿಎಫ್ ಕೇಂದ್ರ ಆರಂಭಿಸುವುದಾಗಿ ತಿಳಿಸಲಾಗಿತ್ತು. ಅಂತೆಯೇ ಮೈಸೂರಿನ ಚೆಲುವಾಂಬ ಆಸ್ಪತ್ರೆ ಹೊರ ರೋಗಿಗಳ ವಿಭಾಗದ ಕಟ್ಟಡದ ಮೇಲ್ಭಾಗದಲ್ಲಿ ಇದಕ್ಕಾಗಿ ಕಟ್ಟಡ ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗದವರು ಕಟ್ಟಡ ನಿರ್ಮಾಣ ಜವಾಬ್ದಾರಿ ವಹಿಸಿಕೊಂಡು, ಕಟ್ಟಡ ನಿರ್ಮಿಸಿದ್ದಾರೆ. ಇದೇಗ ಕೇಂದ್ರಕ್ಕೆ ಬೇಕಾದ ಯಂತ್ರೋಪಕರಣ ಸರಬರಾಜು ಮಾಡಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸದರಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸೇವೆ ನೀಡಲಾಗುತ್ತದೆ ಎಂದು ಎಂಎಂಸಿ ಆ್ಯಂಡ್ ಆರ್‌ಐ ನಿರ್ದೇಶಕಿ ಕೆ.ಆರ್.ದಾಕ್ಷಾಯಿಣಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
100 ರಿಂದ 200 ದಂಪತಿ ಆಗಮನ
ನಗರದ ಚೆಲುವಾಂಬ ಆಸ್ಪತ್ರೆಗೆ ತಿಂಗಳಿಗೆ 100 ರಿಂದ 200 ದಂಪತಿ ಬಂಜೆತನದ ಸಮಸ್ಯೆ ನಿವಾರಣೆಗಾಗಿ ಚೆಲುವಾಂಬ ಹೊರ ರೋಗಿಗಳ ವಿಭಾಗಕ್ಕೆ ಬರುತ್ತಾರೆ. ಇವರಲ್ಲಿ ಹೆಚ್ಚಿನವರು ಬಡ ಹಾಗೂ ಮಧ್ಯಮ ವರ್ಗದವರಾಗಿದ್ದಾರೆ. ‘ಐವಿಎಫ್’ ಸೇವೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬೇಕಾದರೆ 1.5 ರಿಂದ 2.5 ಲಕ್ಷ ರೂ.ವರೆಗೆ ಪಾವತಿಸಬೇಕಾಗುತ್ತದೆ. ಸರ್ಕಾರಿ ವ್ಯವಸ್ಥೆಯಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಈ ಚಿಕಿತ್ಸೆ ದೊರೆಯುತ್ತದೆ. ಸದ್ಯದ ವ್ಯವಸ್ಥೆಯಡಿ ಕೆಳ ಹಂತದ ಪರೀಕ್ಷೆಗಳನ್ನು ಮಾಡಿ ಸಣ್ಣ ಪ್ರಮಾಣದ ತೊಂದರೆಗಳನ್ನು ಬಗೆಹರಿಸಬಹುದು. ಆದರೆ, ದೊಡ್ಡ ಪ್ರಮಾಣದ ಪರಿಹಾರಕ್ಕಾಗಿ ಐವಿಎಫ್ ಕೇಂದ್ರ ಬೇಕಾಗುತ್ತದೆ. ಹಾಗಾಗಿ ಸರ್ಕಾರದಿಂದಲೇ ಈ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಸೇವೆ ಆರಂಭವಾಗುವ ಸಂದರ್ಭದಲ್ಲಿ ದರ ನಿಗದಿಯಾಗಲಿದೆ.
ಕೇಂದ್ರದಲ್ಲಿ ತಜ್ಞ ವೈದ್ಯರ ಕೊಠಡಿಗಳು, ಪ್ರಯೋಗಾಲಯ, ನೋಂದಣಿ ಕೌಂಟರ್, ಸಮಾಲೋಚನಾ ಕೊಠಡಿ ಮೊದಲಾದವು ಸೇರಿದಂತೆ ಕನಿಷ್ಠ 8ರಿಂದ 10 ವಿಭಾಗಗಳನ್ನು ರೂಪಿಸಲಾಗುವುದು. ಐವಿಎಫ್‌ಗೆ ನಿಗದಿಪಡಿಸಿದ ಮಾನದಂಡದ ಮೂಲಕ ಎಲ್ಲವನ್ನೂ ಸಿದ್ಧಪಡಿಸಲಾಗುವುದು. ಅಲ್ಲದೆ ಅತ್ಯಾಧುನಿಕ ಯಂತ್ರೋಪಕರಣ, ಸಲಕರಣೆಗಳನ್ನು ಖರೀದಿಸಲಾಗುತ್ತಿದೆ. ತಜ್ಞ ವೈದ್ಯರು ಮತ್ತು ಇನ್ನಿತರ ಸಿಬ್ಬಂದಿ ನೇಮಕ ಆಗಲಿದೆ.
ಏನಿದು ಕೃತಕ ಗರ್ಭಧಾರಣೆ ?
ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್‌ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ಮೂಲಕ ಗರ್ಭಧಾರಣೆ ಮಾಡಬಹುದು. ಈ ವಿಧಾನದಲ್ಲಿ, ಪತ್ನಿಯ ಅಂಡಾಣು ಹಾಗೂ ಪತಿಯ ವೀರ್ಯಾಣು ತೆಗೆದು ಪ್ರಯೋಗಾಲಯದಲ್ಲಿ ಎರಡನ್ನೂ ಸೇರಿಸಿ ನಿಗದಿತ ಅವಧಿಯವರೆಗೆ ಭ್ರೂಣವನ್ನು ಬೆಳೆಸಲಾಗುತ್ತದೆ. ನಂತರ ಅದನ್ನು ಪತ್ನಿಯ ಗರ್ಭಕೋಶಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಬಂಜೆತನ ಸಾಧ್ಯತೆಯು ಹೆಣ್ಣಿನಿಂದ ಶೇ.30, ಗಂಡಿನಿಂದ ಶೇ.30, ಇಬ್ಬರಿಂದಲೂ ಶೇ.30 ರಷ್ಟು ಹಾಗೂ ತಿಳಿಯದ ಕಾರಣ ಶೇ.10 ರಷ್ಟಿರುತ್ತದೆ. ಇದಕ್ಕೆ ಜೀವನಶೈಲಿ, ಗರ್ಭಕೋಶದಲ್ಲಿನ ಅನನುಕೂಲತೆ, ಗರ್ಭನಾಳ ಬ್ಲಾಕ್ ಆಗಿರುವುದು, ಗಂಡಸರಲ್ಲಿ ವೀರ್ಯ ಕೊರತೆ ಸೇರಿದಂತೆ ನಾನಾ ಕಾರಣಕ್ಕೆ ಬಂಜೆತನ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ದಂಪತಿಯ ಅಂಡಾಣು-ವೀರ್ಯಾಣುವಿನಿಂದ ಭ್ರೂಣವನ್ನು ಬೆಳೆಸಿ ನಂತರ ಗರ್ಭಕ್ಕೆ ಸೇರಿಸುವ ಪ್ರಕ್ರಿಯೆಯೇ ಕೃತಕ ಗರ್ಭಧಾರಣೆಯಾಗಿದೆ.
"
ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಕೃತಕ ಗರ್ಭಧಾರಣೆ ಕೇಂದ್ರ ಆರಂಭಿಸಲಾಗುತ್ತದೆ. ಈ ಸಂಬಂಧ ಕಟ್ಟಡವೂ ಪೂರ್ಣಗೊಂಡಿದೆ. ಕಟ್ಟಡಕ್ಕೆ ಬೇಕಾದ ಉಪಕರಣಗಳ ಖರೀದಿ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಶೀಘ್ರದಲ್ಲೇ ಉಪಕರಣಗಳ ಅಳವಡಿಕೆ ಕಾಮಗಾರಿ ಶುರುವಾಗಲಿದೆ. ಅಂತೆಯೇ ಬಂಜೆತನದಿಂದ ಬಳಲುವವರಿಗೆ ಕೈಗೆಟಕುವ ದರದಲ್ಲಿ ಸರ್ಕಾರಿ ವ್ಯವಸ್ಥೆಯಡಿ ಐವಿಎಫ್ ಸೇವೆ ದೊರೆಯಲಿದೆ.
— ಕೆ.ಆರ್.ದಾಕ್ಷಾಯಿಣಿ ನಿರ್ದೇಶಕಿ, ಎಂಎಂಸಿ