ತಾವು ಲಿಂಗತ್ವ ಅಲ್ಪಸಂಖ್ಯಾತರೆಂದು ಸ್ವಯಂ ಘೋಷಣೆ ಮಾಡುವಂತಿದ್ದ ಮೊದಲಿನ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ವೈದ್ಯಕೀಯ ಪರಿಶೀಲನೆಗೆ ಒಳಗಾಗಬೇಕು ಎಂದು ಮಸೂದೆ ಮಂಡನೆ ಮಾಡಿದೆ ಎಂದು ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟದ ಪ್ರಣತಿ ಪ್ರಕಾಶ್ ಆರೋಪಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಲಿಂಗತ್ವ ಅಲ್ಪಸಂಖ್ಯಾತರಿಂದ ಆಯೋಜಿಸಿದ್ದ ಸಮುದಾಯದವರ ನೋವು ನಲಿವಿನ ಕಥೆಗಳನ್ನು ಒಳಗೊಂಡ ಅಕ್ವಾ ಕೃತಿ ಬಿಡುಗಡೆಗೊಳಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಮುದಾಯದವರನ್ನು ಸಮಾಜ ಮೂಲೆಗುಂಪು ಮಾಡುತ್ತದೆ. ಆದರೆ ಇವರಿಗೂ ಭಾವನೆಗಳಿವೆ ಎಂಬುದನ್ನು ಈ ಕೃತಿ ತೋರಿಸುತ್ತದೆ. ಈ ಮೊದಲು ಲಿಂಗತ್ವ ಅಲ್ಪಸಂಖ್ಯಾತರ ಕಾರ್ಡ್ ಪಡೆಯಲು ಜಿಲ್ಲಾಧಿಕಾರಿ ಕಚೇರಿಗೆ ಸ್ವಯಂ ಘೋಷಣೆಯ ಪ್ರಮಾಣಪತ್ರ ಸಲ್ಲಿಸಿದರೆ ಸಾಕಾಗುತ್ತಿತ್ತು. ಇದರ ಆಧಾರದ ಮೇಲೆ ಕಾರ್ಡ್ ಬರುತ್ತಿತ್ತು. ಇದನ್ನು ಪಡೆದ ಎಷ್ಟೋ ಜನರು ಈಗ ಗೃಹಲಕ್ಷ್ಮಿ ಸೌಲಭ್ಯ ಪಡೆದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇದೀಗ ಮಂಡಿಸಿರುವ ಮಸೂದೆ ಇದಕ್ಕೆ ತಡೆಯೊಡ್ಡಿದ್ದು, ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ದೃಢಪಡಿಸಬೇಕು ಎಂದು ಸೂಚಿಸುತ್ತದೆ. ಇದು ತಮ್ಮ ಸಮುದಾಯದವರ ಮೇಲೆ ಮಾಡಿದ ಪ್ರಹಾರವಾಗಿದೆ ಎಂದು ಕಿಡಿಕಾರಿದರು.
ಸಮುದಾಯದ ಮುಖಂಡ ಟಿ.ಶಿವರಾಮು ಮಾತನಾಡಿ, ಹೊಸ ಮಸೂದೆ ತಮ್ಮ ಸಮುದಾಯದವರ ಮನಸ್ಥಿತಿಗೆ ವಿರುದ್ಧವಾದುದಾಗಿದೆ. ಜತೆಗೆ ಅಂತಹವರು ಸಮುದಾಯದೊಡನೆ ಬೆರೆಯಬಾರದು, ಆ ರೀತಿ ಮಾಡಿದರೆ ಜೈಲು ಶಿಕ್ಷೆ ವಿಧಿಸುವ ಅವಕಾಶ ನೀಡಿದೆ. ಈ ರೀತಿ ಪ್ರಮಾಣಪತ್ರ ಪಡೆಯಬೇಕಾದ ನಿಯಮ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾತ್ರ ಏಕೆ, ತಾನು ಪುರುಷ, ತಾನು ಮಹಿಳೆ ಎಂದು ಇತರರು ವೈದ್ಯಕೀಯ ಪ್ರಮಾಣಪತ್ರದ ಮೂಲಕ ದೃಢಪಡಿಸಿಕೊಳ್ಳುವಂತೆ ಮಾಡಲಿ ಎಂದು ಆಗ್ರಹಿಸಿದರು.
ಕೃತಿಕಾರ ಡಾ.ಎನ್.ವಾಸಯ್ಯ ಮಾತನಾಡಿ, ಅಕ್ವಾ ಎಂಬುದು ಸಮುದಾಯದೊಳಗಿನ ಕೆಲವರಿಗೆ ಬಳಸುವ ಪದ, ತಾನು ಮಹಿಳೆ ಎಂಬ ಭಾವನೆಗಳು ಬಾಧಿಸಲ್ಪಡುವ ಪುರುಷರನ್ನು ಈ ರೀತಿ ಕರೆಯಲಾಗುತ್ತದೆ. ಇವರೂ ಈ ರೀತಿ ಲೈಂಗಿಕ ಅಲ್ಪಸಂಖ್ಯಾತರೇ ಆಗಿರುತ್ತಾರೆ. ಇಂತಹವರ ಭಾವನೆ, ನೋವುಗಳನ್ನು ಈ ಕೃತಿ ಒಳಗೊಂಡಿದೆ. ಈ ರೀತಿ ಲೈಂಗಿಕ ಅಲ್ಪಸಂಖ್ಯಾತರ ಬಗೆಗಿನ ಸಮಗ್ರ ಕಥೆಗಳ ಕಥಾ ಸಂಕಲನ ಕನ್ನಡದಲ್ಲಿ ಬಹುಶಃ ಇದೇ ಮೊದಲಿನದು ಎನ್ನಬಹುದಾಗಿದೆ ಎಂದರು.
ಸಮುದಾಯದ ಅಪ್ಸರಾ ಇತರರು ಇದ್ದರು.