ಜೆಎಸ್‌ಎಸ್ ಔಷಧ ವಿಜ್ಞಾನ ಮಹಾ ವಿದ್ಯಾಲಯದ ವತಿಯಿಂದ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಗುರುವಾರ ಪದವೀಧರ ದಿನ ಕಾರ್ಯಕ್ರಮ ನಡೆಯಿತು. ಜಿ.ಸತ್ಯವತಿ, ಡಾ.ಸಿ.ಜಿ.ಬೆಟಸೂರ್‌ಮಠ್, ಡಾ.ಬಿ.ಸುರೇಶ್, ಡಾ.ಎಚ್.ಬಸವನಗೌಡಪ್ಪ, ಡಾ.ಬಿ.ಮಂಜುನಾಥ್, ಡಾ.ಟಿ.ಎಂ.ಪ್ರಮೋದ್‌ಕುಮಾರ್ ಇದ್ದರು.
- ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತೆ ಜಿ.ಸತ್ಯವತಿ ಕಳವಳ
ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಸೇವಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಎಂದು ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತೆ ಜಿ.ಸತ್ಯವತಿ ಕಳವಳ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪದವೀಧರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ (ಎಐ), ಗೂಗಲ್, ಜೆಮಿನಿ ಹಾಗೂ ಚಾಟ್ ಜಿಪಿಟಿ ಮೂಲಕ ಜನರು ಔಷಧಗಳ ಬಗ್ಗೆ ಮಾಹಿತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ವಯಂ ಚಿಕಿತ್ಸೆ ಅಪಾಯಕಾರಿ ಎಂದರು.
ಶಿಕ್ಷಣ ಪದವಿಯೊಂದಿಗೆ ಅಂತ್ಯಗೊಳ್ಳುವುದಿಲ್ಲ. ನಿರಂತರ ಸಂಶೋಧನೆ ನಡೆಸಿ ಹೊಸ ಔಷಧಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಕೋವಿಡ್ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಗಳು ಹಾಗೂ ಔಷಧ ತಜ್ಞರ ಶ್ರಮದಿಂದ ಅಭಿವೃದ್ಧಿಯಾದ ಲಸಿಕೆಗಳು ಮಾನವಕುಲದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಸ್ಮರಿಸಿದರು.
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವನ ವಿವೇಕ ಮತ್ತು ಸರಿಯಾದ ನಿರ್ಧಾರವೇ ಮುಖ್ಯ. ತಪ್ಪು ಮಾಹಿತಿಯಿಂದ ತಪ್ಪು ಫಲಿತಾಂಶವೇ ದೊರೆಯುತ್ತದೆ ಎಂಬುದನ್ನು ಮನಗಾಣಿಸಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಹಲವು ವರ್ಷಗಳ ಪರಿಶ್ರಮದ ಫಲವಾಗಿ ವಿದ್ಯಾರ್ಥಿಗಳು ಪದವಿ ಪಡೆದು ಜೀವನದ ಹೊಸ ಹಂತಕ್ಕೆ ಕಾಲಿಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ವೈದ್ಯಕೀಯ ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದರೂ ಅದರ ಪ್ರಯೋಜನ ಸಮಾಜದ ಎಲ್ಲ ವರ್ಗಗಳಿಗೂ ಸಮರ್ಪಕವಾಗಿ ತಲುಪುತ್ತಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಮುಂದುವರಿದಿದೆ. ಔಷಧಶಾಸ್ತ್ರ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳು ಔಷಧ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ಉದ್ಯಮಗಳು ಅಥವಾ ಔಷಧ ಮಳಿಗೆಗಳ ನಿರ್ವಹಣೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಸಮಾಜದ ಆರೋಗ್ಯ ರಕ್ಷಣೆಯಲ್ಲಿ ತಮ್ಮ ಪಾತ್ರವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ನೀವುಗಳು ಮಾಡಿದ ಪ್ರಮಾಣವಚನವನ್ನು ಪಾಲಿಸುವುದರೊಂದಿಗೆ ಪ್ರಾಮಾಣಿಕತೆ, ಸತ್ಯನಿಷ್ಠೆ, ನಾಯಕತ್ವ ಹಾಗೂ ವೃತ್ತಿಪರ ಬದ್ಧತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ್‌ಮಠ್, ಜೆಎಸ್‌ಎಸ್ ಎಚ್‌ಇಎಆರ್ ಸಮಕುಲಾಧಿಪಾತಿ ಡಾ.ಬಿ.ಸುರೇಶ್, ಕುಲಪತಿ ಡಾ.ಎಚ್.ಬಸವನಗೌಡಪ್ಪ, ಕುಲಸಚಿವ ಡಾ.ಬಿ.ಮಂಜುನಾಥ್, ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್‌ಕುಮಾರ್ ಇದ್ದರು.