ಅಮೃತ ವಿಶ್ವ ವಿದ್ಯಾಪೀಠಂ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ 16ನೇ ಘಟಿಕೋತ್ಸವದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದಕ, ಪದವಿಯನ್ನು ಪ್ರದಾನ ಮಾಡಲಾಯಿತು. ಡಾ. ಶೈಲೇಶ್ ನಾಯಕ್, ***ಸ್ವಾಮಿನಿ ಶಮದಾಮೃತ ಪ್ರಾಣ, ಡಾ. ಬಿಪಿನ್ ನಾಯರ್ ಇನ್ನಿತರರಿದ್ದರು. 
ಮೈಸೂರು

ಭೂಮಿಯ ಸುಸ್ಥಿರತೆ ಕಾಪಾಡುವುದು ಎಲ್ಲ ಕರ್ತವ್ಯ

ಪ್ರಮುಖ ಮುಖ್ಯಾಂಶಗಳು

  • ಡಾ. ಶೈಲೇಶ್ ನಾಯಕ್ ಅನಿಸಿಕೆ
  • ಅಮೃತ ವಿಶ್ವ ವಿದ್ಯಾಪೀಠಂನ 16ನೇ ಘಟಿಕೋತ್ಸ
  • ಜಾಗತಿಕ ಸವಾಲುಗಳ ಪ್ರಸ್ತಾಪನೆ
ಮೈಸೂರು: ಜೀವ ಶಕ್ತಿಯನ್ನು ಪೋಷಿಸುವ ಸಂಪನ್ಮೂಲ, ಪರಿಸರ ವ್ಯವಸ್ಥೆ ಒದಗಿಸುವ ಭೂಮಿ ಸುಸ್ಥಿರತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಪದ್ಮಶ್ರೀ ಪುರಸ್ಕೃತ, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನಿರ್ದೇಶಕ ಡಾ. ಶೈಲೇಶ್ ನಾಯಕ್ ಹೇಳಿದರು.
ನಗರದ ಅಮೃತ ವಿಶ್ವ ವಿದ್ಯಾಪೀಠಂ ಕ್ಯಾಂಪಸ್‌ನಲ್ಲಿ  ಆಯೋಜಿಸಿದ್ದ 16ನೇ ಘಟಿಕೋತ್ಸವದಲ್ಲಿ ಬಡತನ, ಜೀವನೋಪಾಯ, ಹವಾಮಾನ ಬದಲಾವಣೆ ಹಾಗೂ ಪರಿಸರ ಹಾನಿಯಂತಹ ಜಾಗತಿಕ ಸವಾಲು ಪ್ರಸ್ತಾಪಿಸಿದರು.
ವೇಗವಾಗಿ ಸಾಗುತ್ತಿರುವ ತಾಂತ್ರಿಕ, ಆರ್ಥಿಕ ಪ್ರಗತಿಯು ಅಸಮಾನತೆ ಹೆಚ್ಚಿಸುತ್ತಿದೆ. ಜತೆಗೆ ಡಿಜಿಟಲ್ ಅಂತರ ಕೂಡ ಹೆಚ್ಚಿಸಿದೆ. ಈ ಸವಾಲುಗಳನ್ನು ಅವಕಾಶಗಳಾಗಿ ಪರಿಗಣಿಸಬೇಕು. ಅಭಿವೃದ್ಧಿಯನ್ನು ಸುಸ್ಥಿರಗೊಳಿಸುವ ಮತ್ತು ಜೀವನದ ಗುಣಮಟ್ಟ ಸುಧಾರಿಸುವ ನವೀನ ಪರಿಹಾರ ರೂಪಿಸಬೇಕು ಎಂದು ಹೇಳಿದರು.
ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವಂತೆ ಹಾಗೂ ಸವಾಲು ಎದುರಿಸಲು ಧೈರ್ಯ ಬೆಳೆಸಿಕೊಳ್ಳಬೇಕು ಎಂದೂ ತಿಳಿಸಿದರು.
ಥಾಮಸ್ ಎಡಿಸನ್, ಡಾ.ವಿಕ್ರಮ್ ಸಾರಾಭಾಯಿ ಅವರ ನಾಯಕತ್ವದ ಕುರಿತು ಉಲ್ಲೇಖಿಸಿದ ಅವರು, ಯಶಸ್ಸಿಗೆ ನಿರಂತರ ಪ್ರಯತ್ನ ಅಗತ್ಯ. ಪರಿಣಾಮಕಾರಿ ನಾಯಕತ್ವವೆಂದರೆ ಇತರರು ಬೆಳೆಯಲು ನೆರವಾಗುವುದು. ಜತೆಗೆ ಸಾಮರ್ಥ್ಯವನ್ನೂ ಪ್ರದರ್ಶಿಸಲು ಸೂಕ್ತ ವಾತಾವರಣ ನಿರ್ಮಿಸಿಕೊಳ್ಳುವುದಾಗಿದೆ ಎಂದು ಹೇಳಿದರು.
ಅಹಮದಾಬಾದ್ ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಶಮದಾಮೃತ ಪ್ರಾಣ ಮಾತನಾಡಿ, ಶಿಕ್ಷಣವೆಂದರೆ ಕೇವಲ ಪದವಿ, ಜ್ಞಾನ, ವೃತ್ತಿಪರ ಕೌಶಲ ಸಂಪಾದನೆಯಲ್ಲ. ಅದಕ್ಕಿಂತ ವಿಶಾಲವಾದದ್ದು ಎಂದು ಅಭಿಪ್ರಾಯಪಟ್ಟರು.
ಯಾವುದೇ ವಿಚಾರದ  ಕುರಿತು ಕ್ರಮ ಕೈಗೊಳ್ಳುವ ಮೊದಲು ಯೋಚಿಸುವುದು, ಪ್ರಶ್ನಿಸುವುದು, ಪರಿಶೀಲಿಸುವುದು,  ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ವಿವೇಚನಾ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.
ವಿಶ್ವವಿದ್ಯಾಲಯವನ್ನು ತೊರೆದು ಜೀವನವೆಂಬ ವಿಶಾಲ ಸಮುದ್ರಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಜ್ಞಾನ, ಕೌಶಲ, ಮಹತ್ವಾಕಾಂಕ್ಷೆ, ವಿನಯ, ಪ್ರಾಮಾಣಿಕತೆ, ಧೈರ್ಯ, ಕರುಣೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಮೃತ ವಿಶ್ವವಿದ್ಯಾಪೀಠದ ರಿಜಿಸ್ಟ್ರಾರ್ ಡಾ. ಬಿಪಿನ್ ನಾಯರ್ ಮಾತನಾಡಿ, ಪದವೀಧರರು ಸಮಗ್ರ, ನವೀನ, ಸುಸ್ಥಿರ, ಜ್ಞಾನಾಧಾರಿತ ಭವಿಷ್ಯದ ನಿರ್ಮಾತೃಗಳಾಗಬೇಕು. ಶ್ರೇಷ್ಠತೆ, ಪ್ರಾಮಾಣಿಕತೆ, ಸುಸ್ಥಿರತೆ, ಒಳಗೊಳ್ಳುವಿಕೆ, ಮಾನವ ಸೇವೆಯ ಮೌಲ್ಯ ಎತ್ತಿಹಿಡಿಯಬೇಕು ಎಂದರು.
ಘಟಿಕೋತ್ಸವವು ಕೇವಲ ವಿಶ್ವವಿದ್ಯಾಲಯದ ಶಿಕ್ಷಣದ ಅಂತ್ಯವಲ್ಲ. ಬದಲಾಗಿ ಜೀವನಪರ್ಯಂತದ ಕಲಿಕೆ, ನಾವೀನ್ಯತೆ, ಕರುಣಾಭರಿತ ಸೇವೆಗೆ ಸಮರ್ಪಿತವಾದ ಹೊಸ ಅಧ್ಯಾಯದ ಆರಂಭ. ಪದವೀಧರರ ಜ್ಞಾನವು ವಿವೇಕವಾಗಿ, ಯಶಸ್ಸು ವಿನಯವಾಗಿ ರೂಪುಗೊಳ್ಳಲಿ. ಸಾಧನೆಗಳು ರಾಷ್ಟ್ರದ ಪ್ರಗತಿ, ಮಾನವಕುಲದ ಕಲ್ಯಾಣಕ್ಕೆ ದಾರಿಯಾಗಲಿ ಎಂದು ಆಶಿಸಿದರು. ವಕೀಲ ಓ ಶಾಮ ಭಟ್ ಮಾತನಾಡಿದರು. 
ಕಾಲೇಜಿನ 586 ವಿದ್ಯಾರ್ಥಿಗಳಿಗೆ (ಪಿಎಚ್.ಡಿ, ಸ್ನಾತಕ, ಮತ್ತು ಸ್ನಾತಕೋತ್ತರ) ಪದವಿ ಪ್ರದಾನ ಮಾಡಲಾಯಿತು. ಈ ಪೈಕಿ 6 ಪಿಎಚ್.ಡಿ ಪದವೀಧರರು, 56 ರ‌್ಯಾಂಕ್ ಮತ್ತು ಪದಕ ವಿಜೇತರು ಸೇರಿದ್ದಾರೆ. 14 ಚಿನ್ನ, 8 ಬೆಳ್ಳಿ ಪದಕಗಳನ್ನು ಪ್ರದಾನ ಮಾಡಲಾಯಿತು.
ಉಪಕುಲಸಚಿವ ಡಾ.ಪ್ರಶಾಂತ್ ಆರ್.ನಾಯರ್, ಪರೀಕ್ಷಾ ನಿಯಂತ್ರಕ ಡಾ.ಪಿ.ಕೃಷ್ಣ ಕುಮಾರ್,  ಮಾನವಿಕ ಮತ್ತು ವಾಣಿಜ್ಯ ವಿಭಾಗದ ಡೀನ್ ಪ್ರೊ. ಯು.ಕೃಷ್ಣಕುಮಾರ್, ಅಮೃತ ಮೈಸೂರು ವಿಭಾಗದ ನಿರ್ದೇಶಕ ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಸಹಾಯಕ ಡೀನ್ ಪ್ರೊ.ಶೇಖರ್ ಬಾಬು, ಪ್ರಾಂಶುಪಾಲ ಪ್ರೊ.ಜಿ.ರವೀಂದ್ರನಾಥ್, ಶೈಕ್ಷಣಿಕ ಸಂಯೋಜಕಿ ಡಾ. ರೇಖಾ ಭಟ್ ಇನ್ನಿತರರಿದ್ದರು