ಹುಣಸೂರು ತಾಲೂಕು ಮುಳ್ಳೂರು ಗ್ರಾಮದಲ್ಲಿ ಬಾ ಸೃಷ್ಟಿ ತಂಡದ ವತಿಯಿಂದ ಆಯೋಜಿಸಿದ್ದ ಲಲಿತಕಲಾ ಉಚಿತ ಶಿಬಿರದಲ್ಲಿ ಮಕ್ಕಳು ಆಕರ್ಷಕ ಮುಖವಾಡಗಳನ್ನು ತಯಾರಿಸಿದರು.  
ಮೈಸೂರು

ಮಕ್ಕಳಲ್ಲಿ ಲಲಿತಕಲಾ ಪ್ರಪಂಚ ಪರಿಚಯಿಸುವುದು ಅವಶ್ಯ

ಪ್ರಮುಖ ಮುಖ್ಯಾಂಶಗಳು

  • ಶಿಲ್ಪಕಲಾವಿದ ಎಸ್.ಎನ್.ರಮೇಶ್ ಅಭಿಪ್ರಾಯ
  • ಉಚಿತ ಶಿಬಿರ
ಹುಣಸೂರು: ಮಕ್ಕಳಲ್ಲಿ ಈಗಿನಿಂದಲೇ ಲಲಿತಕಲೆಗಳ ಕುರಿತು ಆಸಕ್ತಿ ಮೂಡಿಸಿದಲ್ಲಿ ಈ ನೆಲದ ಸಾಕಷ್ಟು ಕಲೆಗಳು ಉಳಿಯಲು ಸಾಧ್ಯ ಎಂದು ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಶಿಲ್ಪ ಕಲಾವಿದ ಎಸ್.ಎನ್.ರಮೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಶುಕ್ರವಾರ ಬಾ ಸೃಷ್ಟಿ ತಂಡದ ವತಿಯಿಂದ ಆಯೋಜಿಸಿದ್ದ ನಾಲ್ಕು ದಿನಗಳ ಕಾಲದ ಲಲಿತಕಲಾ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಲೆ ಎನ್ನುವುದು ಕಲಾಕಾರನಿಗೆ ಮಾತ್ರ ಸಮಾಧಾನ ತರುವುದಿಲ್ಲ. ಬದಲಾಗಿ ಕಲೆಯನ್ನು ಆಸ್ವಾದಿಸುವ, ನೋಡುವ ಕಂಗಳಿಗೂ ಸಮಾಧಾನ, ಧೈರ್ಯ, ಸಾತ್ವಿಕತೆ, ನಯವಿನಯ ನಡವಳಿಕೆಯನ್ನು ರೂಪಿಸುತ್ತದೆ. ಭಾವನಾತ್ಮಕ ಸಂಬಂಧಗಳನ್ನು ರೂಪಿಸುತ್ತದೆ. ಮಕ್ಕಳಲ್ಲಿ ಈಗಿಂದಲೇ ಕಲಾ ಪ್ರಪಂಚವನ್ನು ಪರಿಚಯಿಸುವ ಕಾರ್ಯ ಆಗಬೇಕು. ಅದು ಯಾವುದೇ ಕಲೆಯಾಗಲಿ, ಮರಗೆತ್ತನೆ, ಶಿಲ್ಪಕಲೆ, ಚಿತ್ರಕಲೆ, ಗಾಯನ ಯಾವುದೇ ಕ್ಷೇತ್ರದಲ್ಲಿ ಮಕ್ಕಳು ಆಸಕ್ತಿ ಬೆಳೆಸಿಕೊಳ್ಳುವಂತೆ ಶಿಕ್ಷಣ ಮತ್ತು ಸಮಾಜ ಪ್ರೋತ್ಸಾಹಿಸಬೇಕು. ಆಗ ಇಂದಿನ ಮಕ್ಕಳು ಮುಂದಿನ ಸತ್ಪ್ರಜೆಗಳಾಗಲು ಸಾಧ್ಯವೆಂದರು.
ಬಾ ಸೃಷ್ಟಿ ತಂಡದ ಕಾರ್ಯದರ್ಶಿ ಚೇತನ್ ಮಾತನಾಡಿ, ಬಾ ಸೃಷ್ಟಿ ತಂಡವು ವಿದ್ಯಾರ್ಥಿಗಳಿಗೆ ಪ್ರತಿವರ್ಷ ರಂಗಕಲೆಯನ್ನು ಪರಿಚಯಿಸುತ್ತಿದ್ದು, ಇದೀಗ ಇನ್ನಿತರ ಕಲೆಗಳ ಕುರಿತು ಆಸಕ್ತಿ ಮೂಡಿಸುವ ಪ್ರಯತ್ನ ಆರಂಭಿಸಿದೆ.
ಬಾ ಸೃಷ್ಟಿ ತಂಡದಿಂದ ಮುಳ್ಳೂರು ಗ್ರಾಮದ ಮಕ್ಕಳಿಗೆ 4 ದಿನಗಳ ಕಾಲ ಡಿಸೆಂಬರ್ 25ರಿಂದ 28ರವರೆಗೆ ಉಚಿತ ಲಲಿತಕಲಾ ಶಿಬಿರವನ್ನ ಗ್ರಾಮದ ಸರ್ಕಾರಿ ಶಾಲೆ ವರಣದಲ್ಲಿ ಪ್ರಾರಂಭಿಸಲಾಗಿದೆ. ಕಲಾವಿದ ರಮೇಶ್ ಸಾಂಪ್ರದಾಯಿಕ ವಿವಿಧ ವಿನ್ಯಾಸಗಳ ಆನೆ, ಗಣಪತಿ ವಿಗ್ರಹಗಳ ಮರಗೆತ್ತನೆ ಕೆಲಸಗಳನ್ನು ಕಳೆದ 40 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಇವರ ಕಲೆಯನ್ನು ಗುರುತಿಸಿ ಐದು ಬಾರಿ ದಸರಾ ಲಲಿತ ಕಲಾ ಪ್ರಶಸ್ತಿಗಳನ್ನು ಸರ್ಕಾರ ನೀಡಿದೆ. ಮಕ್ಕಳು ಈ ಅಳಿವಿನ ಅಂಚಿನಲ್ಲಿರುವ ಮರಗೆತ್ತನೆ ಕಲೆಯನ್ನು ಕಲಿಯುವ ಮೂಲಕ ಕಲಾಪ್ರಪಂಚವನ್ನು ಉಳಿಸಬೇಕೆಂದರು.
ಸಂಪನ್ಮೂಲ ವ್ಯಕ್ತಿ ಎಸ್‌ಎಫ್ ಹುಸೇನ್ ಇದ್ದರು. ಶಿಬಿರದಲ್ಲಿ ಮಕ್ಕಳಿಗೆ ಜನಪದ ಕಾಗದ ಕತ್ತರಿ ಕಲೆಯಲ್ಲಿ ರಂಗೋಲಿ ವಿನ್ಯಾಸಗಳು, ಬಾಗಿನ ಮೊರಗಳ ಅಲಂಕಾರ ಹಾಗೂ ಬಣ್ಣ ಬಣ್ಣದ ಮುಖವಾಡಗಳನ್ನು ತಯಾರಿಸುವ ಕಲಾ ಚಟುವಟಿಕೆಗಳನ್ನು ನಡೆಸಲಾಯಿತು.