ಎಚ್.ಡಿ.ಕೋಟೆ ಪಟ್ಟಣದ ವಿಶ್ವ ಭಾರತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಈಶ ಗ್ರಾಮೋತ್ಸವ 2026ರ ಕ್ಲಸ್ಟರ್ ಪಂದ್ಯಾವಳಿಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 
ಮೈಸೂರು

ಈಶ ಗ್ರಾಮೋತ್ಸವ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬ

ಎಚ್.ಡಿ.ಕೋಟೆ:

ಈಶ ಗ್ರಾಮೋತ್ಸವವು ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬವಾಗಿದೆ ಎಂದು ಈಶ ಪ್ರತಿನಿಧಿ ಶೈಲಜಾ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ವಿಶ್ವ ಭಾರತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಈಶ ಗ್ರಾಮೋತ್ಸವ-2026ರ ಕ್ಲಸ್ಟರ್ ಪಂದ್ಯಾವಳಿಯಲ್ಲಿ ಗ್ರಾಮೀಣ ಕರ್ನಾಟಕದ ಉತ್ಸಾಹಭರಿತ ಕ್ರೀಡಾ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯ ಮೂಲಕ ಗ್ರಾಮೀಣ ಸಮಾಜವನ್ನು ಒಂದೆಡೆ ತರುವ ಹಾಗೂ ಬೇರುಮಟ್ಟದ ಆಟಗಾರರಲ್ಲಿ ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಜನರನ್ನು ಒಂದೆಡೆ ತಂದು, ಹಳ್ಳಿಗಳ ಸಾಮಾಜಿಕ ಬಾಂಧವ್ಯ ಗಟ್ಟಿಗೊಳಿಸುವುದನ್ನು ಮುಂದುವರಿಸಿದೆ. ಗ್ರಾಮೀಣ ಕರ್ನಾಟಕದಿಂದ ಸಿಕ್ಕಿರುವ ಈ ಅಭೂತಪೂರ್ವ ಸ್ಪಂದನೆಯು ನಮ್ಮ ಹಳ್ಳಿಗಳಲ್ಲಿರುವ ಉತ್ಸಾಹ ಮತ್ತು ಪ್ರತಿಭೆ ಬಿಂಬಿಸುತ್ತದೆ ಎಂದರು.
ಈಶ ಔಟ್‌ರೀಚ್ ಆಯೋಜಿಸಿದ ಕೂಟದಲ್ಲಿ ತಾಲೂಕಿನ ವಿವಿಧ ಹಳ್ಳಿಗಳಿಂದ ಒಟ್ಟು 75 ಮಹಿಳೆಯರ ಥ್ರೋಬಾಲ್ ಆಟಗಾರ್ತಿಯರು ಅತ್ಯಂತ ಉತ್ಸಾಹದಿಂದ ಸ್ಪರ್ಧಿಸಿದರು.
ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ವನ ಸಿರಿ ತಂಡ ಪಡೆದರೆ, ದ್ವಿತೀಯ ಸ್ಥಾನವನ್ನು ಮಾಸ್ತಮ್ಮ ತಂಡ, ತೃತೀಯ ಸ್ಥಾನವನ್ನು ಶ್ರೀ ಕಾಳೇಶ್ವರಿ ತಂಡ ಮತ್ತು 4ನೇ ಸ್ಥಾನವನ್ನು ಕಬಿನಿ ತಂಡ ಪಡೆದುಕೊಂಡಿತು.
ಉತ್ಸಾಹಭರಿತ ಹಾಗೂ ಲವಲವಿಕೆಯ ಮನೋಭಾವವನ್ನು ಪರಿಗಣಿಸಿ, ಕ್ಲಸ್ಟರ್ ಮಟ್ಟದ ಕಾರ್ಯಕ್ರಮದಲ್ಲಿ ಲತಾ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು.
ಇದೆ ಸಂದರ್ಭದಲ್ಲಿ ಸುಪ್ರಿತಾ ಸುರೇಶ್, ಶಿವರಾಜು, ಅಮೃತ್, ವೇಣುಗೋಪಾಲ್, ಗುಣಶ್ರೀ ಸಿಂಚನಾ ಸುಭಾಷ್ ಇದ್ದರು.