- ಜೀವವೈವಿಧ್ಯತೆ ತಾಣದಲ್ಲಿ ಸದ್ದಿಲ್ಲದೆ ಕೆಲಸ ಆರಂಭ
- ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಶ್ಚಿತ
ಮೈಸೂರು: ಜೀವವೈವಿಧ್ಯಮಯ ತಾಣವಾಗಿರುವ ಕಾರಂಜಿ ಕೆರೆ ಆವರಣದಲ್ಲಿ ಸಾಹಸ ಕ್ರೀಡೆಗಾಗಿ ಜಿಪ್‌ಲೈನ್ ನಿರ್ಮಾಣ ಕೆಲಸ ಶುರುವಾಗಿದೆ.
ಈ ಹಿಂದೆ ಇದಕ್ಕೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೀಗ ಸದ್ದಿಲ್ಲದೆ ಕೆಲಸವೇ ಆರಂಭಿಸಲಾಗಿದೆ. ಇದು ಇಲ್ಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಿಶ್ಚಿತ.
ನಗರದ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆಗೆ ಬರುವ ಪ್ರವಾಸಿಗರನ್ನು ಸಾಹಸ ಕ್ರೀಡೆಯತ್ತ ಆಕರ್ಷಿಸಲು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಡಿ 14 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕರ್ನಾಟಕ ರಾಜ್ಯ ಪ್ರಸೋದ್ಯಮ ಇಲಾಖೆಯ ಕರ್ನಾಟಕ ಪ್ರವಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮ ಮೂಲಕ ಈ ಕಾಮಗಾರಿ ಕೈಗೊಳ್ಳಲಾಗಿದೆ.
ಕಾರಂಜಿಕೆರೆಯ ದಕ್ಷಿಣ ಮತ್ತು ಉತ್ತರ ದಿಕ್ಕಿನ ನಡುವೆ ಜಿಪ್‌ಲೈನ್ ನಿರ್ಮಿಸಲು ಯೋಜಿಸಲಾಗಿದೆ. ಇದು 18 ಮೀಟರ್ ಎತ್ತರ ಹಾಗೂ 250 ಮೀಟರ್ ಉದ್ದ ಹೊಂದಿದೆ. ಪ್ರವಾಸೋದ್ಯಮ ಇಲಾಖೆ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಿದೆ. ಕಾಮಗಾರಿ ನಡೆಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅನುಮೋದನೆ ಕೊಟ್ಟಿದೆ.
ಜಿಪ್‌ಲೈನ್ ಸ್ಥಾಪನೆಗಾಗಿ ಫಿಲ್ಲರ್ ನಿರ್ಮಿಸುವ ಕಾಮಗಾರಿ ಆರಂಭಿಸಲಾಗಿದೆ. ಜಿಪ್‌ಲೈನ್ ಕಾರಂಜಿಕೆರೆಯ ಚಿಟ್ಟೆ ಪಾರ್ಕ್‌ಗೆ ಹೊಂದಿಕೊಂಡಂತೆ ನಿರ್ಮಾಣವಾಗಲಿದೆ. ನಜರ್‌ಬಾದ್ ಕಡೆ(ಇರಾನಿ ಮನೆ ಕಡೆ)ಯಿಂದ ಆರಂಭವಾಗುವ ಜಿಪ್‌ಲೈನ್ ಲಲಿತಮಹಲ್ ರಸ್ತೆಗೆ ಹೊಂದಿಕೊಂಡಂತೆ ಕಾರಂಜಿಕೆರೆಯ ಮುಖ್ಯ ದ್ವಾರದ ಬಳಿ ಕೊನೆಗೊಳ್ಳಲಿದೆ. ಕೆರೆ ನೀರಿನ ಮೇಲೆ 18 ಮೀಟರ್ ಎತ್ತರದಲ್ಲಿ ರೋಪ್ ಅಳವಡಿಸಲಾಗುತ್ತದೆ. ಇದರಿಂದ ಜಿಪ್‌ಲೈನ್ ಸಾಹಸ ಮಾಡುವ ಪ್ರವಾಸಿಗರಿಗೆ ಉತ್ತಮ ಅನುಭವ ಕಲ್ಪಿಸಿಕೊಡಲು ಉದ್ದೇಶಿಸಲಾಗಿದೆ.
ಈ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರು ಮೂಲದ ನಿರ್ಮಾಣ ಕಂಪನಿಗೆ ವಹಿಸಲಾಗಿದೆ. 9 ತಿಂಗಳೊಳಗಾಗಿ ಜಿಪ್‌ಲೈನ್ ಅಳವಡಿಕೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿದೆ. ಕಾಮಗಾರಿಯ ಗುಣಮಟ್ಟ ಪರಿಶೀಲಿಸಲು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಂದ ಮೇಲ್ವಿಚಾರಣೆ ನಡೆಯಲಿದೆ. ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಲಾಗಿದೆ.
ಯಾವುದೇ ಅಡೆತಡೆಯಿಲ್ಲದೆ ಕಾಮಗಾರಿ ಪೂರ್ಣಗೊಂಡರೆ ವರ್ಷಾಂತ್ಯದ ವೇಳೆಗೆ ಜಿಪ್‌ಲೈನ್ ಬಳಕೆಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ. ಇಷ್ಟು ದೊಡ್ಡ ಜಿಪ್‌ಲೈನ್ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಲ್ಲ. ಕಾರಂಜಿಕೆರೆ ಜಿಪ್‌ಲೈನ್‌ಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರಂಜಿಕೆರೆ ಜೀವವೈವಿಧ್ಯತೆಯ ನೈಸರ್ಗಿಕ ತಾಣವಾಗಿದೆ. ಪ್ರಸ್ತುತ ಕೆರೆ ಪರಿಸರದಲ್ಲಿ ವಿವಿಧ ಬಗೆಯ ಪಕ್ಷಿ ಸಂಕುಲ, ವಿವಿಧ ಬಗೆಯ ಚಿಟ್ಟೆ ಸಂತತಿ, ದೋಣಿ ವಿಹಾರವೂ ಲಭ್ಯವಿದೆ. ಇದೀಗ ಜಿಪ್‌ಲೈನ್ ಮೂಲಕ ರೋಪ್‌ನಲ್ಲಿ ಕೆರೆ ಪರಿಸರ ವೀಕ್ಷಣೆಯ ಸದಾವಕಾಶವೂ ದೊರೆಯುತ್ತಿರುವುದರಿಂದ ಮೈಸೂರಿನ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗುತ್ತದೆ. ಆದರೆ, ಅಲ್ಲಿನ ಜೀವಿಗಳಿಗೆ ತೊಂದರೆಯಾಗಲಿ ಎಂಬ ಮಾತು ಸಹ ಕೇಳಿ ಬರುತ್ತಿದೆ.
ಇದು ಹಿಂದೆ ತಿರಸ್ಕೃತವಾಗಿತ್ತು
ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ ಕಾರಂಜಿಕೆರೆಯಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಜಿಪ್‌ಲೈನ್, ಫ್ಲೈಓವರ್ ಫುಟ್‌ಪಾತ್, ಕಾರಂಜಿಕೆರೆಯಿಂದ ಮೃಗಾಲಯಕ್ಕೆ ಆಂತರಿಕ ಸಂಪರ್ಕ ಮಾರ್ಗ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ನೀಲಿನಕ್ಷೆ ತಯಾರಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿತ್ತು. ಆದರೆ, ಈ ಯೋಜನೆಯನ್ನು ಈ ಹಿಂದೆಯೇ ಮೈಸೂರು ಮೃಗಾಲಯ ತಿರಸ್ಕರಿಸಿತ್ತು. ಅದರ ಬದಲು ಹಲವು ವರ್ಷದಿಂದ ನನೆಗುದಿಗೆ ಬಿದ್ದಿರುವ ಮತ್ಸಾೃಗಾರ ಕಾಮಗಾರಿ ಪೂರ್ಣಗೊಳಿಸಲು ಆರ್ಥಿಕ ನೆರವು ನೀಡುವಂತೆ ಕೋರಿತ್ತು. ಆದರೆ, ಇದಕ್ಕೆ ಸ್ಪಂದನೆ ದೊರೆತಿರಲಿಲ್ಲ.
ಜಿಪ್‌ಲೈನ್‌ಗೂ ವಿರೋಧ:
ಚಾಮುಂಡಿಬೆಟ್ಟದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಪ್ರಬಲವಾಗಿ ವಿರೋಧಿಸಿದ್ದ ಪರಿಸರವಾದಿಗಳು ಕಾರಂಜಿಕೆರೆಯಲ್ಲಿ ಜಿಪ್‌ಲೈನ್, ಫೈಓವರ್ ಫುಟ್‌ಪಾತ್ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಕ್ಷೇಪಿಸಿದ್ದರು. ಕಾರಂಜಿಕೆರೆ ನೈಸರ್ಗಿಕ ಜೀವ ವೈವಿಧ್ಯತೆ ತಾಣವಾಗಿದ್ದು, ಅದನ್ನು ಮನರಂಜನಾ ತಾಣವಾಗಿಸಬಾರದು ಎಂದು ಆಗ್ರಹಿಸಿದ್ದರು. ಇದಕ್ಕೆ ಮಣಿದ ಮೃಗಾಲಯ 18 ಕೋಟಿ ರೂ. ಯೋಜನೆಯನ್ನು ತಿರಸ್ಕರಿಸಿತ್ತು.
ಪರಿಸರಕ್ಕೆ ಧಕ್ಕೆ
ಪ್ರಸಿದ್ಧ ಪ್ರವಾಸಿ ಆಕರ್ಷಣೆ ತಾಣವಾಗಿರುವ ಕಾರಂಜಿಕೆರೆ 90 ಹೆಕ್ಟೇರ್ ವಿಸ್ತೀರ್ಣವಾಗಿದ್ದು, ಸುಂದರವಾದ ಪ್ರಕೃತಿ ಉದ್ಯಾನ, ಚಿಟ್ಟೆ ಉದ್ಯಾನ, ಪ್ರವಾಸಿಗರು ಪಕ್ಷಿಗಳ ನಡುವೆ ನಡೆದು ಹೋಗುವ ವಾಕ್-ಥ್ರೂ ಇದೆ. ಮೈಸೂರು ಮೃಗಾಲಯದ ಅಧೀನದ ಇದು ವಲಸೆ ಹಕ್ಕಿಗಳಿಗೆ ನೆಚ್ಚಿನ ತಾಣವಾಗಿದೆ. ಜಿಪ್‌ಲೈನ್ ಇಲ್ಲಿನ ನೈಸರ್ಗಿಕ ಪರಿಸರಕ್ಕೆ ಮಾರಕವಾಗಲಿದೆ.