ಐಪಿಎಲ್ 
ಮೈಸೂರು

ಮೈಸೂರಿನಲ್ಲಿ ಐಪಿಎಲ್ ಬೆಟ್ಟಿಂಗ್ : ಐವರ ಬಂಧನ

ಮೈಸೂರು: ಹೆಬ್ಬಾಳ್ ಹಾಗೂ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳ್‌ನ ಎಂಎಸ್‌ಆರ್ ಹೋಟೆಲ್‌ನಲ್ಲಿ ಗುರುವಾರ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಬ್ಬಾಳ್ ಪೊಲೀಸರು ಬಂಧಿಸಿ ಆರೋಪಿಗಳಿಂದ 1 ಲ್ಯಾಪ್‌ಟಾಪ್, 3 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರ್.ಎಸ್. ನಾಯ್ಡು ನಗರದ ಎಂ. ಪ್ರದೀಪ್, ಹೆಬ್ಬಾಳ್‌ನ ಎಚ್.ಎಸ್. ಪ್ರಪುಲ್ ಆರ್ಯ ಬಂಧಿತರು. ಇವರು ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ತಂಡಗಳ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವರಾಜ ಠಾಣೆ: ಟೌನ್‌ಹಾಲ್ ಹಿಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ಬೆನ್ಸ್ ಕಾರಿನಲ್ಲಿ ಗುರುವಾರ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡಿಮೊಹಲ್ಲಾದ ಸಂಜಯ್ ಕುಮಾರ್, ಇಲವಾಲದ ಪಿ.ಪಿ. ವಿನೋದ್, ಪಡುವಾರಹಳ್ಳಿಯ ಲಿಖಿತ್ ಕುಮಾರ್ ಬಂಧಿತರು. ಆರೋಪಿಗಳು ಕಾರಿನಲ್ಲಿ ಕುಳಿತು ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ತಂಡಗಳ ನಡುವಿನ ಐಪಿಎಲ್ ಪಂದ್ಯಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದರು. ಆರೋಪಿಗಳಿಂದ 1 ಬೆನ್ಸ್ ಕಾರು, 15,900 ರೂ. ನಗದು, 3 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.