ಶಾಸಕ ಟಿ.ಎಸ್.ಶ್ರೀವತ್ಸ  
ಮೈಸೂರು

ಸರ್ಕಾರಿ ಜಮೀನು ಕಬಳಿಸುವ ಹುನ್ನಾರ: ತನಿಖೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಶಾಮೀಲಾಗಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ
ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನ ಕುರುಬಾರಹಳ್ಳಿ ಸರ್ವೇ ಸಂಖ್ಯೆ 4ರಲ್ಲಿರುವ ಸರ್ಕಾರಿ ಜಮೀನನ್ನು ಕಬಳಿಸುವ ಹುನ್ನಾರದ ಹಿಂದೆ ದೊಡ್ಡ ವ್ಯಕ್ತಿಗಳು ಶಾಮೀಲಾಗಿದ್ದು, ಈ ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದರು.
24.10 ಎಕರೆ ಸರ್ಕಾರದ ಆಸ್ತಿ ಎನ್ನುವುದು ಗೊತ್ತಿದ್ದರೂ ಸೇಲ್ ಅಗ್ರಿಮೆಂಟ್ ಮಾಡಿಕೊಡಲಾಗಿತ್ತು. ಇದು ಬಹಿರಂಗಪಡಿಸುತ್ತಿದ್ದಂತೆ ಮಾ.6ರಂದು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಯದ ಕರಾರು ರದ್ದುಪಡಿಸಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಾ.5ರಂದು ದಾಖಲೆ ಬಿಡುಗಡೆ ಮಾಡಿದ 24ಗಂಟೆಯೊಳಗೆ ಪ್ರಶಾಂತ್ ಉಚ್ಜಿಲ್ ಎಂಬಾತ ಸೇಲ್ ಅಗ್ರಿಮೆಂಟ್ ರದ್ದುಪಡಿಸಿಕೊಂಡಿದ್ದಾನೆ. ಬೆಂಗಳೂರಿನ ಇಬ್ಬರು ಡೆವಲಪರ್ಸ್‌ಗಳಿಗೆ ಸೇಲ್ ಅಗ್ರಿಮೆಂಟ್ ಮಾಡುವಾಗ 13 ಜನರು ಉಪ ನೋಂದಣಾಧಿಕಾರಿ ಕಚೇರಿಗೆ ಹೋಗಿ ಸಹಿ ಮಾಡಿದ್ದಾರೆ. ಆದರೆ, ರದ್ದುಪಡಿಸುವಾಗ ಪ್ರಶಾಂತ್ ಉಚ್ಹಿಲ್ ಒಬ್ಬರೇ ಎಲ್ಲರ ಪರವಾಗಿ ಸಹಿ  ಮಾಡಿದ್ದಾರೆ. ಇದನ್ನು ನೋಡಿದರೆ ಹಲವಾರು ಅನುಮಾನಗಳಿಗೆ ಕಾರಣವಾಗಲಿದೆ ಎಂದು ಆರೋಪಿಸಿದರು. 
ಸೇಲ್ ಅಗ್ರಿಮೆಂಟ್ ಮಾಡುವಾಗ 4.75 ಕೋಟಿ ರೂ. ಡಿಮಾಂಡ್ ಡ್ರಾಪ್ಟ್ ತೋರಿಸಿದ್ದಾರೆ. ಆದರೆ, ತರಾತುರಿಯಲ್ಲಿ ವಾಪಸ್ ಪಡೆಯುವಾಗ ಮೊತ್ತದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇ.ಡಿ., ಐಟಿ ಅಧಿಕಾರಿಗಳ ಕಣ್ತಪ್ಪಿಸಿ ಇಷ್ಟೊಂದು ವ್ಯವಹಾರ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು.
ಈ ಜಾಗದಲ್ಲಿ ಇಂದಿನ ಮಾರುಕಟ್ಟೆ ದರ ಚದರಡಿ 10 ಸಾವಿರ ರೂ.ನಂತೆ ಎಕರೆಗೆ 43 ಕೋಟಿ ರೂ. ಬೆಲೆ ಬಾಳುತ್ತಿದ್ದು, ಅಂದಾಜು 900 ಕೋಟಿ ರೂ. ಮೌಲ್ಯದ ಆಸ್ತಿಯಾಗಿದೆ. ಏಕಾಏಕಿ ಸೇಲ್ ಅಗ್ರಿಮೆಂಟ್ ರದ್ದುಪಡಿಸಿರುವುದರ ಹಿಂದೆ ಅವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಅಥವಾ ತಮ್ಮನ್ನು ತೃಪ್ತಿಪಡಿಸಲು ಈ ರೀತಿಯ ಕೆಲಸ ಮಾಡಲಾಗಿದೆಯೇ ಸಂಶಯ ಬಂದಿದೆ ಎಂದು ಹೇಳಿದರು.
ತಮ್ಮದಲ್ಲದ ಜಮೀನಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಂಡಿದ್ದ ಪ್ರಶಾಂತ್ ಉಚ್ಜಿಲ್ ಅವರನ್ನು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ ಇರುವುದು ಸರಿಯಲ್ಲ. ಇದರಲ್ಲಿ ಕಂದಾಯ ಇಲಾಖೆ ಹಾಗೂ ಉಪ ನೋಂದಣಾಧಿಕಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಕೈವಾಡ ಇರಬಹುದು. 
ಈ ಬಗ್ಗೆ ತನಿಖೆ ನಡೆಸಬೇಕಿದೆ. ಕುರುಬಾರಹಳ್ಳಿ ಕೆರೆ ಒತ್ತುವರಿಯಾದ ಮೇಲೆ ತೆರವುಗೊಳಿಸಿದರು. ನಂಜನಗೂಡು ರಸ್ತೆಯಲ್ಲಿದ್ದ ಸೈಕಲ್ ಷಾಪ್ ಖಾಲಿ ಮಾಡಿಸಿದರು. ಈಗ ಕ್ರಯವನ್ನು ರದ್ದತಿಗೊಳಿಸಿ ಸುಮ್ಮನಾಗುವ ಕೆಲಸ ಮಾಡಲಾಗಿದೆ. ತಪ್ಪು  ಮಾಡುವುದು, ಆಮೇಲೆ ಸರಿಪಡಿಸುತ್ತೇವೆ ಎನ್ನುವಂತಾಗಿದೆ. ಮುಡಾದಲ್ಲಿ 14 ನಿವೇಶನ ವಾಪಸ್ ಮಾಡಿದ ಮಾದರಿಯಲ್ಲೇ ಅವ್ಯವಹಾರಗಳು ನಡೆಯಲು ದಾರಿಯಾಗಿದೆ ಎಂದು ಕಿಡಿಕಾರಿದರು.
ಕುರುಬಾರಹಳ್ಳಿ ಸರ್ವೇ ಸಂಖ್ಯೆ 4ರ ವಿಚಾರದಲ್ಲಿ ಕೆಲವು ಮಹಾರಾಜರ ಹೆಸರಿನಲ್ಲಿ, ಕೆಲವು ಸರ್ಕಾರಿ ಹೆಸರು ಸೇರಿದಂತೆ ಇನ್ನಿತರ ಹೆಸರಿನಲ್ಲಿವೆ. ಇವುಗಳನ್ನು ಮೊದಲು ಗುರುತಿಸಬೇಕು. 24.10 ಎಕರೆ ಜಮೀನು ಸರ್ಕಾರಿ ಭೂಮಿ ಆಗಿರುವ ಕಾರಣ ಆರ್‌ಟಿಸಿಯಲ್ಲಿ ನಮೂದಾಗಿಸಿ ರಕ್ಷಣೆಗೆ ಬೇಕಾದ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮೇಯರ್ ಶಿವಕುಮಾರ್, ನಗರ ಉಪಾಧ್ಯಕ್ಷ ವಿಶ್ವೇಶ್ವರಯ್ಯ, ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್, ನಗರ ವಕ್ತಾರ ಎಂ.ವಿ.ಮೋಹನ್, ಮಾಧ್ಯಮ ಸಂಚಾಲಕ ಮಹೇಶ್‌ರಾಜೇ ಅರಸ್, ಕೆ.ಆರ್.ಕ್ಷೇತ್ರದ ಅಧ್ಯಕ್ಷ ಗೋಪಾಲ್ ರಾಜೇ ಅರಸ್ ಇದ್ದರು.