ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಶೃಂಗಸಭೆಯಲ್ಲಿ ವಿದೇಶದ 38ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
- ವಿದೇಶದ 38ಕ್ಕೂ ಹೆಚ್ಚು ಪ್ರತಿನಿಧಿಗಳಿಂದ ಸಂವಾದ, ಮಾಹಿತಿ, ಸಂವಹನ
- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಆಯೋಜನೆ
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಎರಡು ದಿನ ಆಯೋಜಿಸಿದ್ದ ಅಂತಾರಾಷ್ಟ್ರೀಯ ಬಿಗ್‌ಕ್ಯಾಟ್(ದೊಡ್ಡಬೆಕ್ಕು) ಶೃಂಗಸಭೆ ಸಂವಾದ, ಮಾಹಿತಿ ಮತ್ತು ಸಂವಹನಕ್ಕೆ ಶುಕ್ರವಾರ ತೆರೆ ಬಿತ್ತು.
ಶೃಂಗಸಭೆ ಅಂಗವಾಗಿ ಅಂತಾರಾಷ್ಟ್ರೀಯ ಹುಲಿಗಳ ಮೈತಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ, ಸಹಯೋಗದೊಂದಿಗೆ ಕರ್ನಾಟಕ ರಾಜ್ಯದಲ್ಲಿ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯನಿರ್ವಹಣಾ ಕ್ರಮಗಳ ಎಕ್ಸಿಕ್ಯೂಟಿವ್ ಕೋರ್ಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅರ್ಮೇನಿಯಾ, ಭೂತಾನ್, ಕಾಂಬೋಡಿಯಾ, ಗೌಟೆಮಾಲ, ಕಜಕಿಸ್ತಾನ, ಲೈಬಿರಿಯಾ, ಮೆಕ್ಸಿಕೋ, ಮಾಲಾವಿ, ಮಾಲಿ, ಮಲೇಶಿಯಾ, ಮಯನ್ಮಾರ್, ನೇಪಾಳ, ನೈಜರ್, ಮಂಗೋಲಿಯಾ, ಪನಾಮಾ, ಪೆರು, ರೊಮಾನಿಯಾ, ಸೋಮಾಲಿಯ, ಶ್ರೀಂಕಾ ಹಾಗೂ ರಷ್ಯಾ ದೇಶಗಳಿಂದ ವಿದೇಶಿ ಅಧಿಕಾರಿಗಳು ಹಾಗೂ ಸಂಶೋಧಕರನ್ನು ಒಳಗೊಂಡಂತೆ ಒಟ್ಟು 38 ಗಣ್ಯರು ಭಾಗವಹಿಸಿದ್ದರು.
ಶೃಂಗಸಭೆಯಲ್ಲಿ ಸುಸ್ಥಿರ ಪರಿಸರ ಪ್ರವಾಸೋದ್ಯಮ ಮತ್ತು ಜನಸಂಪರ್ಕ ಕಾರ್ಯಕ್ರಮಗಳ ವಿಷಯವಾಗಿ ಡಾ. ಕೆ.ಸಿ.ಅನೂಪ್, ಹವಾಮಾನ ಬದಲಾವಣೆ ಶಿಕ್ಷಣ ಕುರಿತು ಸಂತೋಷ್ ಸುತ್ತರ್, ವನಲೋಕ್ ಮಾಹಿತಿ ನೀಡಿದರು. ವನ್ಯಜೀವಿ ಸಂರಕ್ಷಣೆಗಾಗಿ ಭೂದೃಶ್ಯ ವಿಧಾನಗಳು, ವಿಷಯವಾಗಿ ಡಾ. ರಮೇಶ್ ಕೃಷ್ಣಮೂರ್ತಿ, ಡಾ.ಟಿ. ರಮೇಶ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಒದಗಿಸಿದರು.
ಸುಸ್ಥಿರ ಪರಿಸರ ಪ್ರವಾಸೋದ್ಯಮ ಅಧ್ಯಯನದ ಭಾಗವಾಗಿ ಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಕಬಿನಿ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡಿ ನಂತರ ಸಾಕಾನೆಗಳ ನಿರ್ವವಣೆ ಕುರಿತು ಅಧ್ಯಯನ ನಡೆಸಲು ಬಳ್ಳೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿದರು.
ಎರಡನೇ ದಿನದ ಸಭೆಯಲ್ಲಿ ವನ್ಯಪ್ರಾಣಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ, ಸಂರಕ್ಷಣಾ ಕಾರ್ಯಗಳಿಗೆ ಆರ್ಥಿಕ ವ್ಯವಸ್ಥೆ ಕುರಿತು, ಪಶುವೈದ್ಯಾಧಿಕಾರಿ ಎಚ್.ರಮೇಶ್,ಪಿಡಬ್ಲುೃಸಿ ಇಂಡಿಯಾ ಸಂಸ್ಥೆಯ ರಾನೆನ್ ಬ್ಯಾನರ್ಜಿ ಮಾಹಿತಿ ನೀಡಿದರು.
ವಿದೇಶಿ ಪ್ರತಿನಿಧಿಗಳು ತಮ್ಮ ದೇಶದಲ್ಲಿನ ವನ್ಯಜೀವಿ ಸಂಪತ್ತು, ಅವುಗಳ ನಿರ್ವಹಣಾ ಕ್ರಮಗಳು, ಮಾನವ-ವನ್ಯಪ್ರಾಣಿ ಸಂಘರ್ಷಗಳು ಮತ್ತು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಹಂಚಿಕೊಂಡರು. ಭಾರತದಲ್ಲಿ ಆನೆ ಸಂರಕ್ಷಣೆಗೆ ಇರುವ ಸವಾಲುಗಳ ಕುರಿತಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ರಮೇಶ್‌ಕುಮಾರ್ ಪಾಂಡೆ ಮಾಹಿತಿ ನೀಡಿದರು.
ಜಾಗತಿಕವಾಗಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ಸುಧಾರಣೆಗಾಗಿ ಜಾರಿಗೆ ತರಬಹುದಾದ ಸಂರಕ್ಷಣಾ ಕಾರ್ಯತಂತ್ರಗಳು, ವಿದೇಶಿ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಶೃಂಗಸಭೆಯಲ್ಲಿ ವಿದೇಶಾಂಗ ಸಚಿವಾಲಯದ ನಿತಿನ್ ಪ್ರಮೋದ್, ಹೆಚ್ಚುವರಿ ಮಹಾನಿರ್ದೇಶಕ ರಮೇಶ್‌ಕುಮಾರ್ ಪಾಂಡೆ, ಜೆರೋಮ್ ಮಿಂಜ್, ಡಾ. ಸಂಜಯನ್ ಕುಮಾರ್, ಸುಭಾಷ್ ಮಾಲ್ಖೆಡೆ, ಕುಮಾರ್ ಪುಷ್ಕರ್, ಹರಿಣಿ ವೇಣುಗೋಪಾಲ್, ಡಾ. ರಮೇಶ್ ಕುಮಾರ್, ಪ್ರಭಾಕರನ್, ಸೀಮಾ ಇತರರು ಇದ್ದರು.