ರೇಷ್ಮೆ 
ಮೈಸೂರು

ರೇಷ್ಮೆ ಕೃಷಿಯತ್ತ ಒಲವು

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • 200 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಣೆ ಮಾಡುವ ಆಲೋಚನೆ
  • ಇಲಾಖೆಯಿಂದ ಬೆಳೆಗಾರರಿಗೆ ಅಗತ್ಯ ನೆರವು
ರೇಷ್ಮೆ ಸೀರೆ ತಯಾರಿಕೆಯಲ್ಲಿ ಮೈಸೂರು ತನ್ನದೇ ಆದ ಪಾರಂಪರಿಕ ಬ್ರ್ಯಾಂಡ್ ಹೊಂದಿದೆ. ಇಂತಹ ಸಾಂಪ್ರದಾಯಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯಲ್ಲಿ ಪ್ರಸ್ತುತ ರೇಷ್ಮೆ ಕೃಷಿಯು ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗತ್ತಿದೆ.
2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಜಿಲ್ಲಾದ್ಯಂತ 2,721.65 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡಲಾಗಿದ್ದು, 1,593 ಟನ್ ರೇಷ್ಮೆ ಗೂಡನ್ನು ಉತ್ಪಾದನೆ ಮಾಡಲಾಗಿದೆ. ಅದೇ ರೀತಿ ಕಳೆದ ಎರಡು ವರ್ಷಗಳಲ್ಲಿ ಅಂದರೆ 2023-24ನೇ ಸಾಲಿನಲ್ಲಿ 2,353.80 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಸಕ್ರಿಯವಾಗಿತ್ತು. 1,407 ಟನ್ ಗೂಡು ಉತ್ಪಾದನೆಯಾಗಿತ್ತು. 2024-25ರಲ್ಲಿ 2,503.16 ಹೆಕ್ಟೇರ್ ಪ್ರದೇಶಕ್ಕೆ ಕೃಷಿ ಮಾಡಲಾಗಿದ್ದು, 1,461 ಟನ್ ಗೂಡು ಉತ್ಪಾದನೆ ಮಾಡಲಾಗಿದೆ. ಈ ಅಂಕಿ-ಅಂಶಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ಸುಮಾರು 200 ಹೆಕ್ಟೇರ್ ಭೂಮಿಯಲ್ಲಿ ರೇಷ್ಮೆ ಕೃಷಿ ವಿಸ್ತರಣೆಯಾಗುತ್ತಿದ್ದು, ಅದೇ ಪ್ರಮಾಣದಲ್ಲಿ ಗೂಡಿನ ಉತ್ಪಾದನೆಯಲ್ಲಿ ಕೂಡ ಹೆಚ್ಚಳವಾಗುತ್ತಿದೆ.
ಜಿಲ್ಲೆಯಲ್ಲಿ ರೈತರು ರೇಷ್ಮೆ ಕೃಷಿಯತ್ತ ಒಲವು ತೋರುತ್ತಿದ್ದಾರೆ. ಇದಕ್ಕೆ ಕಾರಣ ಪ್ರಸ್ತುತ ದಿನಗಳಲ್ಲಿ ರೇಷ್ಮೆ ಗೂಡಿಗೆ ಸ್ಥಿರ ಬೆಲೆ ದೊರಕುತ್ತಿರುವುದು. ಇದೇ ಮುಖ್ಯ ಕಾರಣವಾಗಿದ್ದು ಇದರೊಂದಿಗೆ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಹಿಪ್ಪುನೇರಳೆ ಸೊಪ್ಪು ಬೆಳೆಯುವುದು ಹಾಗೂ ರೇಷ್ಮೆ ಹುಳು ಸಾಕಣೆ ಮಾಡುವುದರಿಂದ ನಷ್ಟದ ಪ್ರಮಾಣ ಶೇಕಡವಾರು ಕೂಡ ಸೂಕ್ಷ್ಮ ಪ್ರಮಾಣದಲ್ಲಿ ಇರುತ್ತದೆ. ಮನೆಯಲ್ಲಿ ಇರುವ ಜನರೇ ಸುಲಭವಾಗಿ ಈ ಕಾರ್ಯ ಮಾಡಬಹುದಾಗಿರುವುದರಿಂದ ರೈತರು ರೇಷ್ಮೆ ಕೃಷಿಯತ್ತ ಚಿತ್ತ ಹರಿಸಿದ್ದಾರೆ.
ಜಿಲ್ಲೆಯ ತಿ.ನರಸೀಪುರ ತಾಲೂಕಿನಲ್ಲಿ 695.81 ಹೆಕ್ಟೇರ್, ನಂಜನಗೂಡು ತಾಲೂಕಿನಲ್ಲಿ 510.67 ಹೆಕ್ಟೇರ್, ಮೈಸೂರು ತಾಲೂಕಿನಲ್ಲಿ 471.13 ಹೆಕ್ಟೇರ್, ಎಚ್.ಡಿ.ಕೋಟೆ ತಾಲೂಕಿನಲ್ಲಿ 339.14 ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿಯನ್ನು ರೈತರು ಕೈಗೊಂಡಿದ್ದಾರೆ. ಪಿರಿಯಾಪಟ್ಟಣ ಮತ್ತಿತರ ಕಡೆಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದಾರೆ.
ವರ್ಷದಿಂದ ವರ್ಷಕ್ಕೆ ರೇಷ್ಮೆ ಕೃಷಿ ಮಾಡುವ ರೈತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವರ್ಷಕ್ಕೆ ಸರಾಸರಿ 250ರಿಂದ 300 ಜನರು ಹೊಸದಾಗಿ ರೇಷ್ಮೆ ಕೃಷಿ ಪ್ರಾರಂಭ ಮಾಡುತ್ತಿದ್ದಾರೆ. ಮೈಸೂರು ತಾಲೂಕಿನ ಕೆಂಪಯ್ಯನಹುಂಡಿ, ದಾರಿಪುರ ಮೊದಲಾದ ಗ್ರಾಮಗಳಲ್ಲಿ 180ರಿಂದ 200 ರೈತರು ತೊಡಗಿಸಿಕೊಂಡಿದ್ದು ಹಲವಾರು ರೈತರು ಬೆಳೆಯಲು ಮುಂದೆ ಬರುತ್ತಿದ್ದಾರೆ.

ಅಧಿಕಾರಿಗಳ ಉತ್ತೇಜನ

ಜಿಲ್ಲೆಯಲ್ಲಿ ರೇಷ್ಮೆ ಕೃಷಿ ವಿಸ್ತರಣೆಯಾಗಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ರೈತರಿಗೆ ಉತ್ತೇಜನ ನೀಡುತ್ತಾ ಇದ್ದಾರೆ. ರೇಷ್ಮೆ ಇಲಾಖೆಯಿಂದ ಯಾವ ಸೌಲಭ್ಯಗಳು ದೊರೆಯುತ್ತವೆ. ಯಾವುದಕ್ಕೆ ಎಷ್ಟು ಸಬ್ಸಿಡಿ ಸಿಗುತ್ತದೆ. ಇಲಾಖೆಯು ರೈತರಿಗೆ ಹೇಗೆ ಬೆಂಬಲವಾಗಿ ನಿಲ್ಲುತ್ತದೆ ಎನ್ನುವ ವಿಷಯಗಳನ್ನು ಒಳಗೊಂಡ ಕರಪತ್ರಗಳನ್ನು ಮುದ್ರಿಸಿ ಪ್ರತಿಯೊಂದು ಗ್ರಾಮಕ್ಕೂ ಹಂಚಲಾಗುತ್ತಿದೆ. ಈಗಾಗಲೇ ಸಮರ್ಪಕವಾಗಿ ರೇಷ್ಮೆ ಕೃಷಿ ಕೈಗೊಂಡಿರುವ ರೈತರ ಯಶೋಗಾಥೆಯನ್ನು ಮಾದರಿಯಾಗಿ ಪ್ರದರ್ಶಿಸುವ ಮೂಲಕ ಪ್ರೋತ್ಸಾಹ ನೀಡುವ ಕೆಲಸ ಮಾಡಲಾಗುತ್ತಿದೆ.

ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಚಟುವಟಿಕೆ

ರೇಷ್ಮೆ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರು ಹಾಗೂ ಅಧಿಕಾರಿಗಳು ಪರಸ್ಪರ ಹಂಚಿಕೊಳ್ಳಲು ವಾಟ್ಸ್‌ಆ್ಯಪ್ ಗ್ರೂಪ್ ರಚನೆ ಮಾಡಿಕೊಂಡಿದ್ದಾರೆ. ಈ ಗುಂಪಿನಲ್ಲಿ ರೈತರು ರೇಷ್ಮೆ ಬೆಳೆಯಲ್ಲಿ ಆಗುತ್ತಿರುವ ಸಮಸ್ಯೆ, ಯಾವ ಸಮಯದಲ್ಲಿ ಯಾವ ಔಷಧ ಸಿಂಪಡಿಸಬೇಕು ಎನ್ನುವ ವಿಷಯವನ್ನು ಅಧಿಕಾರಿಗಳಿಂದ ಪಡೆದುಕೊಳ್ಳುತ್ತಾರೆ. ಅದೇ ರೀತಿ ಅಧಿಕಾರಿಗಳು ರೈತರು ಯಾವ-ಯಾವ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಬೇಸಿಗೆ ಕಾಲದಲ್ಲಿ ನಿರ್ವಹಣೆ ಹೇಗಿರಬೇಕು ಎನ್ನುವ ಮಾಹಿತಿ ನೀಡುತ್ತಾರೆ.
ಅಲ್ಲದೆ ರೈತರು ಪರಸ್ಪರ ಸಂವಹನ ನಡೆಸಿಕೊಳ್ಳುತ್ತಾರೆ. ಯಾರಿಗಾದರೂ ರೈತರಿಗೆ ಹಿಪ್ಪುನೇರಳೆ ಸೊಪ್ಪು ಬೇಕಾದರೆ, ನಮಗೆ ಇಷ್ಟು ಸೊಪ್ಪು ಬೇಕಾಗಿದೆ. ಯಾರ ಬಳಿ ಸಿಗುತ್ತದೆ ಎಂದು ಕೇಳುತ್ತಾರೆ. ಹೆಚ್ಚಿಗೆ ಇದ್ದವರು ನೀಡುತ್ತಾರೆ. ಇದೇ ರೀತಿ ಮಾರುಕಟ್ಟೆಯಲ್ಲಿ ಧಾರಣೆಯನ್ನು ತಿಳಿದುಕೊಳ್ಳುತ್ತಾರೆ.
ಬೇರೆ ಕೃಷಿಯು ಈ ಸಂದರ್ಭದಲ್ಲಿ ಹಾವನ್ನು ಹೊಡೆದು ಹದ್ದಿಗೆ ಹಾಕಿದಂತೆ. ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿ ದುಡ್ಡು ಕೈಗೆ ಬರುವವರೆಗೂ ಗ್ಯಾರಂಟಿ ಇರುವುದಿಲ್ಲ. ಆದರೆ, ರೇಷ್ಮೆ ಮಾರುಕಟ್ಟೆಯಲ್ಲಿ ಬೆಲೆಯೂ ಸ್ಥಿರವಾಗಿದೆ. 25 ದಿನ ಕೆಲಸ ಮಾಡಿದರೆ 100 ಕೆ.ಜಿ. ಗೂಡಿಗೆ 80 ಸಾವಿರ ರೂ. ಆದಾಯ ಗಳಿಸಬಹುದು. ಮನೆಯವರೇ ಸಾಕಣೆ ಮಾಡುವ ಕೆಲಸದಲ್ಲಿ ತೊಡಗಿಕೊಂಡರೆ ಅಂತಹ ಖರ್ಚು ಇರುವುದಿಲ್ಲ ಎನ್ನುತ್ತಾರೆ ರೇಷ್ಮೆ ಬೆಳೆಗಾರ ಚನ್ನೇಗೌಡ.
"

ಮೈಸೂರು ಜಿಲ್ಲೆಯಲ್ಲಿ ರೈತರು ರೇಷ್ಮೆ ಕೃಷಿ ಮಾಡಲು ಮುಂದೆ ಬರುತ್ತಿದ್ದಾರೆ. 2026-27ನೇ ಸಾಲಿಗೆ ಗುರಿಯನ್ನು ಹಾಕಿಕೊಳ್ಳಲಾಗುತ್ತಿದ್ದು ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತರಣೆ ಮಾಡುವ ಆಲೋಚನೆ ಇದೆ. ರೇಷ್ಮೆ ಕೃಷಿಯಲ್ಲಿ ತೊಡಗುವ ರೈತರಿಗೆ ಇಲಾಖೆ ವತಿಯಿಂದ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.