- ಹೋಟೆಲ್, ಪೆಟ್ರೋಲ್ ಬಂಕ್, ವಾಣಿಜ್ಯ ಮಳಿಗೆಗಳು, ಸಾರ್ವಜನಿಕ ಸಂಸ್ಥೆಗಳಲ್ಲಿ ಬಳಕೆಗೆ ಸಹಕಾರ
- ಮೈಸೂರು ಮಹಾನಗರ ಪಾಲಿಕೆ ಸೂಚನೆ
- ಶೌಚಗೃಹ ಬಳಕೆಯಂತಹ ಮೂಲಸೌಲಭ್ಯವನ್ನು ನಿರಾಕರಿಸುವುದು ಮಾನವೀಯತೆ ಹಾಗೂ ಗೌರವಕ್ಕೂ ವಿರುದ್ಧ
ಮೈಸೂರು: ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನಗರ ವ್ಯಾಪ್ತಿಯಲ್ಲಿರುವ ಎಲ್ಲ ಹೋಟೆಲ್, ಪೆಟ್ರೋಲ್ ಬಂಕ್, ವಾಣಿಜ್ಯ ಮಳಿಗೆಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಶೌಚಗೃಹ ಬಳಕೆಗೆ ಅವಕಾಶ ನೀಡಬೇಕು ಎಂದು ಪಾಲಿಕೆ ಸೂಚಿಸಿದೆ.
ಪೌರಕಾರ್ಮಿಕರು ದಿನದ ಬಹುಪಾಲು ಸಮಯವನ್ನು ನಗರ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ಕಾರ್ಯದಲ್ಲಿ ದುಡಿಯುತ್ತಿದ್ದು, ಶೌಚಗೃಹ ಬಳಕೆಯಂತಹ ಮೂಲಸೌಲಭ್ಯವನ್ನು ನಿರಾಕರಿಸುವುದು ಮಾನವೀಯತೆ ಹಾಗೂ ಗೌರವಕ್ಕೂ ವಿರುದ್ಧ ಎಂದು ಪಾಲಿಕೆ ತಿಳಿಸಿದೆ.
ಪೌರಕಾರ್ಮಿಕರಿಗೆ ಶೌಚಗೃಹ ಬಳಕೆಯನ್ನು ನಿರಾಕರಿಸುವುದು 2013ರ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಿಷೇಧ ಮತ್ತು ಪುನರ್ವಸತಿ ಕಾಯ್ದೆಯ ಉದ್ದೇಶ ಹಾಗೂ ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಮಿಷನ್-ನಗರ ಮಾರ್ಗಸೂಚಿಗಳು ಹಾಗೂ 1976ರ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಅಧಿಕಾರಗಳಿಗೂ ವಿರುದ್ಧವಾಗಿರುತ್ತದೆ.
ಇಂತಹ ನಿರಾಕರಣೆ ಭಾರತ ಸಂವಿಧಾನದ 21ನೇ ವಿಧಿ ಅಡಿಯಲ್ಲಿ ನೀಡಲಾಗಿರುವ ಜೀವ ಮತ್ತು ಮಾನವ ಗೌರವದ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಪಾಲಿಕೆ ಎಚ್ಚರಿಸಿದೆ.
ಆದ್ದರಿಂದ ಎಲ್ಲ ಸಂಸ್ಥೆಗಳು ಯಾವುದೇ ಭೇದ ಭಾವವಿಲ್ಲದೆ ಪೌರಕಾರ್ಮಿಕರಿಗೆ ಶೌಚಗೃಹ ಬಳಕೆಗೆ ಸಹಕಾರ ನೀಡಬೇಕು ಎಂದು ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.