ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) 
ಮೈಸೂರು

ಮೈಸೂರಿನಲ್ಲಿ 15ರಂದು ಸ್ಫೂರ್ತಿ ಪ್ರೇರಣಾ ಸಮಾವೇಶ

ಪ್ರಮುಖ ಮುಖ್ಯಾಂಶಗಳು

  • ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಜನ್ಮದಿನ ಅಂಗವಾಗಿ ಸಮಾವೇಶ ಆಯೋಜನೆ
  • ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಎರಡು ಸಾವಿರ ಕಾರ್ಯಕರ್ತರು ಭಾಗಿ
ಮೈಸೂರು: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಜನ್ಮದಿನ ಅಂಗವಾಗಿ ದೇಶಾದ್ಯಂತ ಜನ ಕಲ್ಯಾಣ ದಿವಸ್ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಭಾಗ ಮಟ್ಟದ ಸ್ಫೂರ್ತಿ ಪ್ರೇರಣಾ ಸಮಾವೇಶವನ್ನು ಜ.15ರಂದು ಬೆಳಗ್ಗೆ 10.30ಕ್ಕೆ ನಗರದ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ.
ಸಂಸದ ರಾಜಾರಾಮ್ ಸಮಾವೇಶವನ್ನು ಉದ್ಘಾಟಿಸುವರು. ಮೈಸೂರು, ಚಾಮರಾಜನಗರ, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಎರಡು ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು, ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರಿಂದ ಸಂಗ್ರಹಿಸಿದ ಹಣದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ವಿಚಾರಕ್ಕಿಂತ ಕೇವಲ ಕುರ್ಚಿ ವಿಚಾರಗಾಗಿ ಕಿತ್ತಾಟ ನಡೆಯುತ್ತಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ದಾಖಲೆ ನಿರ್ಮಿಸಿರುವುದರಿಂದ ಜನರಿಗೆ ಸಂತಸ ಏನಾದರೂ ಆಗಿದೆಯೇ?
 ದೇವರಾಜ ಅರಸು ಅವರು ಸಾವಿರಾರು ಭೂರಹಿತರಿಗೆ ಭೂಮಿ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ ಹೇಗೆ ಅರಸು ಅವರಿಗೆ ಹೋಲಿಕೆ ಮಾಡಿಕೊಳ್ಳುತ್ತಾರೆ ಎಂದು ಕುಟುಕಿದರು.
ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಆದ್ಯತೆ ಕೊಟ್ಟು ಅಭಿವೃದ್ಧಿ ಕಡೆಗಣಿಸಲಾಗಿದೆ. ಅಲ್ಪಸಂಖ್ಯಾತರು ಮತ್ತು ದಲಿತರಿಗೂ ಸರ್ಕಾರ ಮೋಸ ಮಾಡಿದೆ. ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲು ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರ ಕೊರತೆ ಇದೆ. ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ.
 ಆದ್ದರಿಂದ ಕೂಡಲೇ ಅಧ್ಯಾಪಕರನ್ನು ನೇಮಕ ಮಾಡಬೇಕು. ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಮೂರು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆಯನ್ನೂ ನೀಗಿಸಬೇಕು ಎಂದು ಒತ್ತಾಯಿಸಿದರು. 
ಪಕ್ಷದ ಮುಖಂಡರಾದ ಪಿ.ಚಂದ್ರಶೇಖರ್, ಬಸವಣ್ಣ, ಹರೀಶ್, ನಂಜುಂಡಿ, ರಾಜೇಶ್ ಇದ್ದರು