ಸರಗೂರು ತಾಲೂಕಿನ ಪಟ್ಟಣದ ದಿನಸಿ ಅಂಗಡಿ ಮತ್ತು ಬೇಕರಿಗಳಿಗೆ ಆಹಾರ ಸುರಕ್ಷತಾಧಿಕಾರಿಗಳೂ ಆದ ಟಿಎಚ್‌ಒ ಡಾ ಟಿ. ರವಿಕುಮಾರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜತೆಯಲ್ಲಿ ಅಧಿಕಾರಿಗಳು ಇದ್ದರು.
- ಆಹಾರ ಸುರಕ್ಷತಾಧಿಕಾರಿ, ಟಿಎಚ್‌ಒ ಅನಿರೀಕ್ಷಿತ ಭೇಟಿ
ಸರಗೂರು: ಪಟ್ಟಣದ ದಿನಸಿ ಅಂಗಡಿ ಮತ್ತು ಬೇಕರಿಗಳಿಗೆ ಆಹಾರ ಸುರಕ್ಷತಾಧಿಕಾರಿಗಳು ಆದ ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮತನಾಡಿದ ಅವರು, ಪಟ್ಟಣದ ಬೀದಿಬರಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 2011 ರನ್ವಯ ಆಹಾರದ ತಯಾರಿಕೆ ಮತ್ತು ವಿತರಣೆಯಲ್ಲಿನ ಶುಚಿತ್ವ ಹಾಗೂ ಗುಣಮಟ್ಟ ಕುರಿತು ಅರಿವು ಮೂಡಿಸುವುದು ಹಾಗೂ ಶಿಬಿರಗಳನ್ನು ಏರ್ಪಡಿಸುವುದರ ಮುಖಾಂತರ ಪುರಸಭೆ ವ್ಯಾಪ್ತಿಯಲ್ಲಿ ಉಚಿತವಾಗಿ 100 ನೋಂದಣಿಗಳನ್ನು ಮಾಡಿಸಬೇಕು ಎಂದರು.
ಎಲ್ಲ ಬೇಕರಿ, ಹೋಟೆಲ್ ಮತ್ತು ಬೀದಿ ಬದಿಯ ಹಣ್ಣಿನ ವ್ಯಾಪಾರ ಮಾಡುವವರು ಕಡ್ಡಾಯವಾಗಿ ಆಹಾರ ಪರವಾನಗಿ ಪಡೆಯಬೇಕು ಮತ್ತು ವ್ಯಾಪಾರ ಮಾಡುವ ಸ್ಥಳಗಳನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಜನರಿಗೆ ಶುದ್ಧವಾದ ಆಹಾರ ಮತ್ತು ಜ್ಯೂಸ್‌ಗಳನ್ನು ನೀಡಬೇಕು. ಹಣ್ಣುಗಳನ್ನು ಕಟ್ ಮಾಡಿದ ನಂತರ ಗ್ಲಾಸ್ ಬಾಕ್ಸ್‌ನಲ್ಲಿ ಇಡಬೇಕು. ಕೊಳೆತ ಹಣ್ಣುಗಳಿಂದ ಜ್ಯೂಸ್ ತಯಾರಿಸಬಾರದು, ತ್ಯಾಜ್ಯವನ್ನು ಒಂದು ಕಡೆ ಶೇಖರಣೆ ಮಾಡಿ ಪುರಸಭೆಯಿಂದ ಬರುವ ವಾಹನಕ್ಕೆ ನೀಡಬೇಕು. ಯಾವುದೇ ಕಾರಣಕ್ಕೂ ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣು ಗಳಿಂದ ಜ್ಯೂಸ್ ತಯಾರಿಸಬಾರದು ಹಾಗೂ ಮಾರಾಟ ಮಾಡಬಾರದು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರವಿರಾಜ್, ಶರಣಪ್ಪ ರಾಮಣಿ ಪ್ರತಾಪ್ ಇನ್ನಿತರರು ಹಾಜರಿದ್ದರು.