ಮಾದಿಗ ಸಮುದಾಯಕ್ಕೆ ಅನ್ಯಾಯ 
ಮೈಸೂರು

ಎಚ್.ಸಿ.ಮಹದೇವಪ್ಪ ಟೀಂನಿಂದ ಮಾದಿಗ ಸಮುದಾಯಕ್ಕೆ ಅನ್ಯಾಯ

ಮೈಸೂರು: ಸರ್ಕಾರದ ಮಟ್ಟದಲ್ಲಿ ಮಾದಿಗರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಸಚಿವರಾದ ಮಹದೇವಪ್ಪ, ಪ್ರಿಯಾಂಕ್ ಖರ್ಗೆ, ಜಿ.ಪರಮೇಶ್ವರ್ ಹಾಗೂ ಹಿರಿಯ ಅಧಿಕಾರಿ ರಂದೀಪ್ ಅವರು ಒಂದೇ ಸಮುದಾಯಕ್ಕೆ ಸೇರಿದ್ದು, ಇವರೆಲ್ಲರೂ ಸೇರಿ ಮಾದಿಗ ಸಮುದಾಯಕ್ಕೆ ನಿರಂತರ ಅನ್ಯಾಯ ಎಸಗುತ್ತಿದ್ದಾರೆ ಎಂದು ಕರ್ನಾಟಕ ಸಾಮಾಜಿಕ ನ್ಯಾಯಪರ ವಕೀಲರ ವೇದಿಕೆಯ ಅಧ್ಯಕ್ಷ ಎಸ್.ಅರುಣ್‌ಕುಮಾರ್ ಆರೋಪಿಸಿದರು.
ಮಹದೇವಪ್ಪ ಆ್ಯಂಡ್ ಟೀಮ್ ಡಿಪಿಆರ್ ಸೆಕ್ಷನ್ ಅನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ನಾಯಕ ಸಮುದಾಯವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಒಳಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮೊದಲ ದಿನದಿಂದಲೂ ವಿರೋಧ ಮಾಡಿಕೊಂಡು ಬಂದಿದ್ದು, ಈಗ ಸಂಪುಟದ ನಿರ್ಧಾರದ ವಿರುದ್ಧವೇ ದೊಡ್ಡ ಷಡ್ಯಂತರ ಮಾಡಿ, ಕುತಂತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಮಾದಿಗ ಸಮುದಾಯದ ವಿರುದ್ಧ ಸಾಕಷ್ಟು ಹುನ್ನಾರಗಳು ನಡೆಯುತ್ತಿದ್ದು, ಒಳಮೀಸಲಾತಿಗೆ ಸಂಬಂಧಿಸಿದಂತೆ ಸಚಿವ ಸಂಪುಟದಲ್ಲಿ ತೆಗೆದುಕೊಂಡಿರುವ ನಿರ್ಧಾರದಂತೆ 56,432 ಹುದ್ದೆಗೆ ಒಳಮೀಸಲಾತಿ ಜಾರಿಯಾಗದಿದ್ದರೆ, ಸಮಾಜದಲ್ಲಿ ರಕ್ತ ಕ್ರಾಂತಿ ನಡೆಯಲಿದೆ ಎಂದು ಎಚ್ಚರಿಸಿದರು.
ಧಾರವಾಡದಲ್ಲಿ ನಿರುದ್ಯೋಗಿ ಯುವಕರು ಸರ್ಕಾರದ ಬಾಕಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ದೊಡ್ಡ ಮಟ್ಟದ ಹೋರಾಟ ಮಾಡಿದ ನಂತರ ಮುಖ್ಯಮಂತ್ರಿ ಸಂಪುಟ ಸಭೆ ನಡೆಸಿ ಒಳಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿರುತ್ತದೆ. ಇದರಿಂದಾಗಿ ಸುಮಾರು 56,432 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಸ್ಥಗಿತಕೊಂಡಿರುತ್ತದೆ. ನೇಮಕಾತಿ ಪ್ರಕ್ರಿಯೆಯನ್ನು ತುರ್ತಾಗಿ ನಿರ್ಧರಿಸಬೇಕಿರುವುದರಿಂದ ಹಾಗೂ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ 2022ರ ಡಿ.28ರ ಆದೇಶದ ಪೂರ್ವದಲ್ಲಿ ಜಾರಿಯಲ್ಲಿದ್ದ ಮೀಸಲಾತಿ ರೋಸ್ಟರ್ ಬಿಂದುವಿನಂತೆ (ಮೀಸಲಾತಿ ಪ್ರಮಾಣ ಶೇ.50ಕ್ಕೆ) ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ ಎಂದರು.
ಈ ಆದೇಶ ಹೊರಡಿಸಿದ ನಂತರ ಮಹದೇವಪ್ಪ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಡಿ.ರಂದೀಪ್ ಸೇರಿಕೊಂಡು ಡಿಪಿಎಆರ್‌ನಲ್ಲಿ 1995 ಮತ್ತು 2022ರ ಪದ್ಧತಿ ಒಳಮೀಸಲಾತಿ ಜಾರಿ ಮಾಡಿ ನೇಮಕಾತಿ ಮಾಡುವಂತೆ ಆದೇಶಿಸಿ, ಕ್ಯಾಬಿನೆಟ್ ಆದೇಶ ಧಿಕ್ಕರಿಸಿದ್ದಾರೆ ಎಂದು ದೂರಿದರು.
ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಹೇಂದ್ರಕುಮಾರ್ ಮಿತ್ರ ಮತ್ತು ಅಲೆಮಾರಿ ಸಮುದಾಯದವರು ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಚಾರಣೆಯಲ್ಲಿದ್ದು, ಮಹೇಂದ್ರಕುಮಾರ್ ಮಿತ್ರ ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ.17ಕ್ಕೆ ಹೋಗಿರುವುದು ಕಾನೂನುಬಾಹಿರವಾಗಿದೆ ಎಂದು ಚಾಲೆಂಜ್ ಮಾಡಿ, ಅದು ಕಾನೂನು ಬಾಹಿರ ಆಗಿರುವುದರಿಂದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ ಶೇ.15ರಿಂದ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3ರಿಂದ 7ರಷ್ಟು ನೀಡಬೇಕು ಎಂದು ಚೀಫ್ ಜಸ್ಟೀಸ್ ಆಫ್ ಕರ್ನಾಟಕ ಅವರ ಬಳಿ ಸಲ್ಲಿಸಿದ್ದಾರೆ. ಶೇ.17ರಷ್ಟು ನೀಡಲು ಸಾಧ್ಯವಿಲ್ಲ ಎಂದು ಚೀಫ್ ಜಸ್ಟೀಸ್ ಆಫ್ ಕರ್ನಾಟಕ ತಿಳಿಸಿದ್ದಾರೆ. ಈ ವೇಳೆ ಅಡ್ವೊಕೇಟ್ ಜನರಲ್ ಆಫ್ ಕರ್ನಾಟಕ ಅವರು 17ರಷ್ಟು ಹೊಸ ನೇಮಕಾತಿ ಪ್ರಕ್ರಿಯೆ ಮಾಡಬೇಡಿ ಆದೇಶ ಮಾಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಅತಿ ಹಿಂದುಳಿದವರಿಗೆ ಮೀಸಲಾತಿ ಮಾಡಬೇಕಿತ್ತು. ಆದರೆ, ನಮ್ಮನ್ನೂ ಭೋವಿ, ಲಂಬಾಣಿ, ಬಂಜಾರ, ಸಮುದಾಯದ ಜತೆ ಸೇರಿಸಿರುವುದರಿಂದ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಆಗಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಅಂತಿಮ ಆದೇಶದ ನಂತರ ನೇಮಕಾತಿ ಮಾಡಬೇಕು ಎಂದು ತಿಳಿಸಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲರಾದ ಮಾಳಪ್ಪ ಕುರ್ಕಿ, ಶಿವಕುಮಾರ್ ಎಂ.ಬೆಳ್ತೂರು, ಎಂ.ಆರ್. ಸುರೇಂದ್ರಕುಮಾರ್, ಸಿದ್ದಯ್ಯ, ಮಲ್ಲು, ಬೂದಿತಿಟ್ಟು ರಾಜೇಂದ್ರ, ದಾಸಯ್ಯ ಇದ್ದರು.