ಮಾಜಿ ಸಚಿವ ಶ್ರೀರಾಮುಲು 
ಮೈಸೂರು

ಎಸ್ಸಿ, ಎಸ್ಟಿಗಳಿಗೆ ಮೀಸಲಾತಿಯಲ್ಲಿ ಅನ್ಯಾಯ, ಸಿಎಂ ಬಳಿಗೆ ಬಿಜೆಪಿ ನಿಯೋಗ : ಮಾಜಿ ಸಚಿವ ಬಿ.ಶ್ರೀರಾಮುಲು

ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹಂಚಿಕೆಯಲ್ಲಿ ರಾಜ್ಯ ಸರ್ಕಾರ ಅನ್ಯಾಯ ಮಾಡಿದ್ದು, ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಬಳಿ ನಿಯೋಗ ತೆರಳಲಾಗುವುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿತ್ತು. ಎಸ್ಸಿ ಸಮುದಾಯಕ್ಕೆ ಶೇ.15 ರಿಂದ 17, ಎಸ್ಟಿ ಸಮುದಾಯಕ್ಕೆ ಶೇ.3 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸ ಲಾಗಿತ್ತು. ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಏರಿಸಲಾಗಿತ್ತು. ಆದರೆ, ಎಸ್ಸಿ, ಎಸ್ಟಿಗಳಿಗೆ ನಾವು ಹೆಚ್ಚು ಮಾಡಿದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಡಿತ ಮಾಡಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ನಿಗದಿ ಮಾಡಿರುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ದೊಡ್ಡ ನಾಯಕರು. ಆದರೆ ಅವರು ಎಸ್ಸಿ, ಎಸ್ಟಿಯ ಮೀಸಲಾತಿ ಹೆಚ್ಚಳಕ್ಕೆ ಆಸಕ್ತಿ ತೋರುತ್ತಿಲ್ಲ. ಅಹಿಂದ ನಾಯಕರು ಎಂದು ಹೇಳಿಕೊಳ್ಳುವ ಅವರು ಈ ಸಮುದಾಯಗಳ ಋಣ ತೀರಿಸದೆ ಅನ್ಯಾಯ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಸ್ಸಿಗಳ ಮೀಸಲಾತಿ ಶೇ.17ಕ್ಕೆ, ಎಸ್ಟಿಗಳ ಮೀಸಲಾತಿ ಶೇ.7ಕ್ಕೆ ಏರಿಸಲಾಗುವುದು. ಇದನ್ನು ಬೇಕಿದ್ದಲ್ಲಿ ನಾವು ರಕ್ತದಲ್ಲಿ ಬರೆದುಕೊಡುತ್ತೇವೆ. ರಾಜ್ಯ ಸರ್ಕಾರ ಮೀಸಲಾತಿ ಅನ್ಯಾಯ ಸರಿಪಡಿದೆ ಇದ್ದಲ್ಲಿ ದೊಡ್ಡಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೆ, ಈ ತಡೆಯಾಜ್ಞೆ ತೆರವುಗೊಳಿಸಲು ಸರ್ಕಾರ ಆಸಕ್ತಿ ತೋರುತ್ತಿಲ್ಲ, ಮೀಸಲಾತಿ ಹೆಚ್ಚಳ ವಿಚಾರವಾಗಿ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದವನ್ನೂ ಮಂಡಿಸಲಿಲ್ಲ. ಎಸ್ಸಿ, ಎಸ್ಟಿಗಳಿಗೆ ನಾವು ಮಾಡಿದ ಮೀಸಲಾತಿ ಹೆಚ್ಚಳದಿಂದ ಕಾಂಗ್ರೆಸ್‌ಗೆ ಹೊಟ್ಟೆಕಿಚ್ಚು ಶುರವಾಯಿತು. ಆ ಕಾರಣಕ್ಕೆ ಅವರು ಇದೀಗ ಮೀಸಲಾತಿ ಕಡಿತಗೊಳಿಸಿದ್ದಾರೆ. ಅಲ್ಲದೆ, ಹಲವು ಸಮುದಾಯಗಳನ್ನು ಎಸ್ಸಿ ಎಸ್ಟಿ ಸಮುದಾಯದ ಪಟ್ಟಿಗೆ ಸೇರಿಸಿದ್ದಾರೆ. ಹೀಗಾಗಿ ಪ್ರಸ್ತುತ ನೀಡಿರುವ ಮೀಸಲಾತಿ ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಮಾಜಿ ಮೇಯರ್‌ಗಳಾದ ಸಂದೇಶ್ ಸ್ವಾಮಿ, ಶಿವಕುಮಾರ್, ಪಕ್ಷದ ಪ್ರಮುಖರಾದ ಡಾ.ಕೆ.ವಸಂತ್ ಕುಮಾರ್, ಎಸ್. ಮಹಾದೇವಯ್ಯ, ಪ್ರಪುಲ್ಲಾ ಮಲ್ಲಾಡಿ ಹಾಗೂ ಇತರರು ಇದ್ದರು.