ಶಿವಕುಮಾರ್ 
ಮೈಸೂರು

ಪರಿಶಿಷ್ಟ ವರ್ಗಕ್ಕೆ ಮೀಸಲಾತಿಯಲ್ಲಿ ಅನ್ಯಾಯ: ಮಾಜಿ ಮೇಯರ್ ಶಿವಕುಮಾರ್ ದೂರು

ಪ್ರಮುಖ ಮುಖ್ಯಾಂಶಗಳು

  • ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಕಾಂಗ್ರೆಸ್ ನಿಂದ ಸಾಧ್ಯವಾಗಿಲ್ಲ
  • ಬಸವರಾಜ ಬೊಮ್ಮಾಯಿ ಅವರು ಶೇ.7ಕ್ಕೆ ಏರಿಸಿದ್ದ ಮೀಸಲಾತಿಯನ್ನು ಶೇ.3ಕ್ಕೆ ಇಳಿಸಲಾಗಿದೆ
ಮೈಸೂರು:ಪರಿಶಿಷ್ಟ ವರ್ಗಕ್ಕೆ ಶಾಸನ ಬದ್ಧವಾಗಿ ದೊರೆಯಬೇಕಾದ ಮೀಸಲಾತಿ ದೊರಕಿಸಿಕೊಡುವಲ್ಲಿ ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಮಾಜಿ ಮೇಯರ್ ಶಿವಕುಮಾರ್ ದೂರಿದರು.
ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಸಿಗಬೇಕಿರುವ ಮೀಸಲಾತಿ ಸೌಲಭ್ಯವನ್ನು ದೊರಕಿಸಿಕೊಡುವುದಕ್ಕೆ ಕಾಂಗ್ರೆಸ್‌ನಿಂದ ಇನ್ನೂ ಸಾಧ್ಯವಾಗಿಲ್ಲ. ಅಲ್ಲದೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಇರುವ ತಡೆಯಾಜ್ಞೆ ತೆರವುಗೊಳಿಸಲು ವಿಫಲವಾಗಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ವರದಿ ಆಧಾರದ ಮೇಲೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಎಸ್‌ಟಿ ಪ್ರವರ್ಗಕ್ಕೆ ಶೇ.ಮೂರರಷ್ಟು ಇದ್ದ ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದರು. ಆದರೆ ಅದನ್ನು ಅನುಷ್ಠಾನಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿಲ್ಲ. ಈಗ ಯಾರೋ ಇಬ್ಬರು ಖಾಸಗಿ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ತಡೆಯಾಜ್ಞೆ ದೊರೆತಿದೆ. ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ಸಮರ್ಪಕವಾದ ಮಾಹಿತಿ ನೀಡದೆ. ತಡೆಯಾಜ್ಞೆ ತೆರವುಗೊಳಿಸದೆ ಕೈ ಚೆಲ್ಲಿಕುಳಿತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಕೂಡಲೇ ನಾಯಕ ಸಮಾಜಕ್ಕೆ ನ್ಯಾಯ ಒದಗಿಸಲು, ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಳಿಸಲು ಕಾನೂನು ಪ್ರಕ್ರಿಯೆ ಚುರುಕುಗೊಳಿಸಬೇಕು. ಇದಕ್ಕೆ ಪೂರಕವಾಗಿ ಬಿಜೆಪಿಯಿಂದ ಸಮುದಾಯವನ್ನು ಜಾಗೃತಿಗೊಳಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮೀಸಲಾತಿ ದೊರೆಯುವಂತೆ ಮಾಡಲು ಸರ್ಕಾರದ ಮೇಲೆ ಒತ್ತಡ ತರಲು ನಗರದಲ್ಲಿ ಜು. 7ರಂದು ಕೃಷ್ಣಮೂರ್ತಿಪುರಂನ ನಿತ್ಯೋತ್ಸವ ಕಲ್ಯಾಣಮಂಟಪದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಸಚಿವರಾದ ಬಿ.ಶ್ರೀರಾಮುಲು, ರಮೇಶ್‌ಜಾರಕಿಹೊಳಿ, ರಾಜೂಗೌಡ, ಶಾಂತರಾಮ್ ಸಿದ್ದಿ, ಎಸ್.ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವರು, ಮಾಜಿ ಸಂಸದರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಮತ್ತಿತರ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ ಮಾತನಾಡಿ, ಪರಿಶಿಷ್ಟ ಪಂಗಡದ ಬೇಡಿಕೆಯನ್ನು ಮುಂದಿಟ್ಟು ರಾಜ್ಯಾದ್ಯಂತ ಈಗಾಗಲೇ ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ ಆಯೋಜಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಪ್ರಾರಂಭಗೊಂಡ ಸಮಾವೇಶವನ್ನು ರಾಯಚೂರು, ದಾವಣಗೆರೆ, ಹೊಸಪೇಟೆಯಲ್ಲಿ ನಡೆಸಿ ಈಗ ಮೈಸೂರು ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ ಎಂದರು.
ಮೀಸಲಾತಿ ವಿಚಾರದಲ್ಲಿ ಪರಿಶಿಷ್ಟ ಪಂಗಡಕ್ಕೆ ದೊಡ್ಡ ಅನ್ಯಾಯ ಆಗಿದೆ. ಈ ಹಿಂದೆ ಮೈಸೂರು ಭಾಗದವರೇ ಮುಖ್ಯಮಂತ್ರಿ ಅಗಿದ್ದರೂ ನಮಗೆ ನ್ಯಾಯ ಕೊಡಿಸದೆ ಅನ್ಯಾಯ ಮಾಡಲಾಗಿದೆ. ರಾಜಕೀಯ ಮೀಸಲಾತಿ ದೊರೆತಿದ್ದರಿಂದ ಹದಿನೈದು ವಿಧಾನಸಭೆ, ಎರಡು ಲೋಕಸಭಾ ಕ್ಷೇತ್ರದಲ್ಲಿ ಅವಕಾಶ ದೊರೆತಿದೆ. ಆದರೆ ಈಗ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನಮಗೆ ದೊಡ್ಡ ಅನ್ಯಾಯಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಮೈಸೂರು ನಗರ ಎಸ್‌ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್ ನಾಯಕ, ಮುಖಂಡರಾದ ಕೃಷ್ಣಕುಮಾರ್, ಎಸ್.ಮಹೇಶ್‌ಕುಮಾರ್, ರಾಜ್ಯ ಸಮಿತಿಯ ಸದಸ್ಯ ಮಂಜುನಾಥಪುರಂ ಎಂ ಮಹೇಶ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಹುಲ್ಲಹಳ್ಳಿ ನಾಗೇಂದ್ರ ಇತರರು ಇದ್ದರು.