ಸರಗೂರು ತಾಲೂಕಿನ ಪಟ್ಟಣದ 5ನೇ ವಾರ್ಡಿನ ಶ್ರೀ ಇಂದ್ರಾಣಮ್ಮ ದೇವಿಯ 26ನೇ ವರ್ಷದ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ವೇಳೆ ಸ್ಥಳೀಯ ಮುಖಂಡರು, ಜನಪ್ರತಿನಿಧಿಗಳು, ಭಕ್ತರು ಭಾಗಿಯಾಗಿದ್ದರು.
ಸರಗೂರು: ಪಟ್ಟಣದ 5ನೇ ವಾರ್ಡ್‌ನಲ್ಲಿ ಇರುವ ಇಂದ್ರಾಣಮ್ಮ ದೇವಿಯ 26ನೇ ವರ್ಷದ ಪೂಜಾ ಮಹೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಮಹೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಳಿರು-ತೋರಣ ಕಟ್ಟಿ, ರಂಗೋಲಿ ಬಿಡಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಗಣಪತಿ ಹೋಮ, ಪುಣ್ಯಾಹ, ಕಳಸ ಪ್ರತಿಷ್ಠಾಪನೆ, ನವಗ್ರಹ ಹೋಮ, ದುರ್ಗಹೋಮ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಕಪಿಲಾ ನದಿಗೆ ತೆರಳಿ ಗಂಗೆ ಪೂಜೆ ನಡೆಸಿ, ಪೂರ್ಣಕುಂಭ ಕಲಶದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಮಂಗಳವಾದ್ಯ, ನಂದಿಕಂಬ, ಸತ್ತಿಗೆ, ಬ್ಯಾಂಡ್‌ಸೆಟ್, ಚಂಡೆ, ಹಳೆ ಹೆಗ್ಗುಡಿಲು ನೀಲಕಂಠ ತಂಡದಿಂದ ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳ ಜತೆಯಲ್ಲಿ ಮೆರವಣಿಗೆ ಸಾಗಿತು. ಉತ್ಸವ ಮೂರ್ತಿಯು ದೇವಾಲಯಕ್ಕೆ ತಲುಪಿದ ನಂತರ ವಿಶೇಷ ಪೂಜೆ ನಡೆಸಿ, ಮಹಾ ಮಂಗಳಾರತಿ ಮಾಡಿ ಪ್ರಸಾದ ವಿನಿಯೋಗ ಮಾಡಲಾಯಿತು. ನಂತರ ಅನ್ನಸಂತರ್ಪಣೆ ನಡೆಸಲಾಯಿತು.
ಮೆರವಣೆಗೆಯಲ್ಲಿ ಹೆಣ್ಣು ಮಕ್ಕಳು 101 ಪೂರ್ಣಕುಂಭ ಕಳಸ ಹೊತ್ತು ಹರಕೆ ತೀರಿಸಿದರು. ಪಟ್ಟಣ ಪಂಚಾಯಿತಿ ಸದಸ್ಯ ನೂರಾಳ ಸ್ವಾಮಿ, ಗೋಬಿ ರಂಗಸ್ವಾಮಿ, ಯಜಮಾನರಾದ ತಮ್ಮಣ್ಣ, ನರಸಿಂಹೇಗೌಡ, ಅಲಂಕಾರ ಸಮಿತಿ ಅಧ್ಯಕ್ಷ ರವಿಗೌಡ, ಮುಖಂಡರಾದ ರಾಜೇಶ್, ಲೋಕೇಶ್, ಶಶಿ, ಸುನೀಲ್, ಅನಿಲ್ ಮೆಡಿಕಲ್, ಪಪಂ ಮಾಜಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಪಪಂ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಶ್ರೀನಿವಾಸ, ನವೀನ್, ರಾಮಚಂದ್ರ, ಶ್ರೀನಾಥ್ ಹಾಗೂ 5ನೇ ವಾರ್ಡಿನ ಯುವಕ ಸಂಘದ ಪದಾಧಿಕಾರಿಗಳು, ಇಂದ್ರಾಣಮ್ಮ ದೇವಸ್ಥಾನ ಸಮಿತಿ ಸದಸ್ಯರು, ಮಹಿಳಾ ಸಂಘ ಸದಸ್ಯರು ಇದ್ದರು.