Ramp Walk At Eiffel Tower
- ಸೀರೆಯುಟ್ಟು ಐಫೆಲ್ ಟವರ್ ಮುಂದೆ ರ‍್ಯಾಂಪ್ ವಾಕ್ ಮಾಡಿದ ನಾರಿಯರು
- ವಿದೇಶದಲ್ಲಿ ಮೈಸೂರು ಸಿಲ್ಕ್ ಸೀರೆ, ಭಾರತ ಸಂಸ್ಕೃತಿಯ ಸಂಪ್ರದಾಯ ಅನಾವರಣ
- ಮಹಿಳೆಯರ ಇನೋಸೆಂಟ್ ಕಂಡು ಮಾರುಹೋದ ನೆಟ್ಟಿಗರು
Ramp Walk At Eiffel Tower: ಮದುವೆ, ಶುಭ ಸಮಾರಂಭಕ್ಕೆ ಸಾಂಪ್ರದಾಯಿಕವಾಗಿ ಸೀರೆಯುಡಬೇಕು ಎಂದು ಬಯಸುವ ಪ್ರತಿ ಹೆಣ್ಣು ಬಯಸೋದು ಮೈಸೂರು ಸಿಲ್ಕ್ ಸೀರೆಯನ್ನು. ಹೀಗಾಗಿ ಕಡಿಮೆ ಬೆಲೆಗೆ ಎಲ್ಲಿಯೇ ಮೈಸೂರು ಸಿಲ್ಕ್ ಸ್ಯಾರಿ ಮೇಳ ನಡೆಸುತ್ತಿದ್ದರು ಖರೀದಿಗೆ ಮುನ್ನುಗ್ಗುತ್ತಾರೆ. ದೀರ್ಘ ಕಾಲ ಬಾಳಿಕೆ ಬರುವ ಇಲ್ಲಿನ ರೇಷ್ಮೆ ಜಗತ್ಪ್ರಸಿದ್ಧವಾಗಿದೆ. ಸದ್ಯ ವೈರಲ್ ಆಗುತ್ತಿರುವ ವಿಚಾರ ಏನೆಂದರೆ, ಮಹಿಳೆಯರ ಗುಂಪೊಂದು ಮೈಸೂರು ಸಿಲ್ಕ್ ಸ್ಯಾರಿ ಧರಿಸಿ, ಐಫೆಲ್ ಟವರ್ ಮುಂದೆ ರ‍್ಯಾಂಪ್ ವಾಕ್ ಮಾಡಿರುವುದು.
ಹೌದು, ಪ್ಯೂರ್ ಮೈಸೂರ್ ಸಿಲ್ಕ್ ಬೈ ಧ್ವನಿ ಸಿಲ್ಕ್ಸ್ ಎನ್ನುವ ಖಾತೆಯಿಂದ ಮಹಿಳೆಯರು ಸೀರೆಯುಟ್ಟು ಹೆಜ್ಜೆ ಹಾಕಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತದಿಂದ ಪ್ಯಾರಿಸ್ವರೆಗೂ ಸೀರೆಯ ಮ್ಯಾಜಿಕ್ ಎಲ್ಲ ಕಡೆಯೂ ಪಸರಿಸಿದೆ ಎಂದು ಶೀರ್ಷಿಕೆ ಕೊಟ್ಟು ಅಪರೂಪದ ವಿಡಿಯೋ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ನಲವತ್ತರಿಂದ ಹಿಡಿದು ಐವತ್ತು ವರ್ಷ ಮೇಲ್ಪಟ್ಟ ಮಹಿಳೆಯರು ವಿಶ್ವಪ್ರಸಿದ್ಧ ಗೋಪುರವಾದ ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ಒಬ್ಬೊಬ್ಬರಾಗಿ ಸೀರೆಯ ಸೆರಗಿನ ಅಂಚನ್ನು ಹಿಡಿದು ರ‍್ಯಾಂಪ್ ವಾಕ್ ಮಾಡಿದ್ದಾರೆ. ಒಬ್ಬೊಬ್ಬರದ್ದು ವಿಶಿಷ್ಟ ಶೈಲಿಯ ಸಿಲ್ಕ್ ಸೀರೆಯಾಗಿದೆ. ನಾರಿಯರು ಯಾವುದೇ ಆತಂಕ ಭಯವಿಲ್ಲದೆ, ನಗುಮುಖದಲ್ಲಿ ಕ್ಯಾಮೇರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಆ ಮೂಲಕ ಅವರು ವಿದೇಶದಲ್ಲಿ ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ.
ನೆಟ್ಟಿಗರು ಏನಂತಾರೆ?
ಇದು ಕೇವಲ ರ‍್ಯಾಂಪ್ ವಾಕ್ ಅಲ್ಲ ವಿದೇಶ ಮಟ್ಟದಲ್ಲಿ ನಮ್ಮ ದೇಶದ ಸಂಪ್ರದಾಯ, ಸಾಂಸ್ಕೃತಿಯನ್ನು ಅನಾವರಣಗೊಳಿಸಿರುವುದು. ನಿಜಕ್ಕೂ ಅದ್ಭುತ ಎಂದು ಕೊಂಡಾಡಿದ್ದಾರೆ. ಸೀರೆ ವಿಶ್ವದ ಅತ್ಯುನ್ನತ ಅದ್ಭುತ ಉಡುಪು ಎನ್ನುವುದನ್ನು ಈ ನಾರಿಯರು ಸಾಬೀತು ಪಡಿಸಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಹೇಳಿದ್ದು ಹೀಗೆ, ಮೊದಲೇ ಯುರೋಪಿಯನ್ನರು ಭಾರತೀಯರು ಹೆಚ್ಚು ಮಾತನಾಡುತ್ತಾರೆ ಎಂದು ದೂರುತ್ತಾರೆ. ಇಂತಹ ಸಮಯದಲ್ಲಿ ಅಲ್ಲಿ ನಾವು ಗಲಾಟೆ ಮಾಡಿ ಮತ್ತೊಬ್ಬರಿಗೆ ಸಮಸ್ಯೆಯಾಗುವಂತೆ ನಡೆದುಕೊಳ್ಳಬಾರದು ಎಂದಿದ್ದಾರೆ.