ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಎಚ್.ಎಂ.ದಾರುಕೇಶ ಮಾತನಾಡಿದರು. ಪ್ರೊ.ಎ.ಪಿ.ಜ್ಞಾನಪ್ರಕಾಶ್,ಪ್ರೊ.ಎಸ್.ಕೆ.ನವೀನ್‌ಕುಮಾರ್, ಸಿ.ಎಸ್.ಆನಂದಕುಮಾರ್, ಪ್ರೊ.ಎಂ.ರಾಮನಾಥಂ ನಾಯ್ಡು, ಎನ್.ಆನಂದಗೌಡ, ಪ್ರೊ.ಎಸ್.ನಿರಂಜನ್‌ರಾಜ್ ಇದ್ದರು.
- ಬಾಹ್ಯಾಕಾಶ ವಿಷಯ ಅಧ್ಯಯನ ಮಾಡಿದವರಿಗೆ ದೇಶ-ವಿದೇಶಗಳಲ್ಲಿ ಬಹಳ ಬೇಡಿಕೆ ಇದೆ
- ಗಗನಯಾತ್ರಿಗಳ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಕ್ಷಮತೆ ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಪಡಿಸವೇಕಾಗುತ್ತದೆ
ಮೈಸೂರು:ಭಾರತವು 2035ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣ ನಿರ್ಮಿಸುವ ಗುರಿ ಹೊಂದಿದೆ ಎಂದು ಬೆಂಗಳೂರಿನ ಇಸ್ರೋದ ಮಾನವ ಬಾಹ್ಯಾಕಾಶ ಯಾನ ಕೇಂದ್ರದ ವಿಜ್ಞಾನಿ ಡಾ.ಬಿ.ಎಚ್.ಎಂ.ದಾರುಕೇಶ ಹೇಳಿದರು.
ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಭಾರತದ ಬಾಹ್ಯಾಕಾಶ ಯಾನ- ಅನಂತ ಅವಕಾಶಗಳ ಒಂದು ಪಯಣ ಕುರಿತು ಮಾತನಾಡಿದರು.
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ 2035ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣ ನಿರ್ಮಿಸುವ ಗುರಿ ಹೊಂದಿದೆ. ಅಲ್ಲದೆ 2040ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವ ಮಹತ್ವಾಕಾಂಕ್ಷೆಯಿದ್ದು, ಆ ವೇಳೆಗೆ 48 ಗಗನಯಾತ್ರಿಗಳ ಅಗತ್ಯವಿದೆ ಎಂದರು.
ಮಾನವನನ್ನು ಅಂತರಿಕ್ಷಕ್ಕೆ ಕಳುಹಿಸುವುದಷ್ಟೇ ಅಲ್ಲದೆ, ಅಂತರಿಕ್ಷದಲ್ಲಿ ಮಾನವನ ಸುರಕ್ಷಿತ ಉಪಸ್ಥಿತಿ ಖಚಿತಪಡಿಸಿಕೊಳ್ಳಬೇಕು. ಮುಖ್ಯವಾಗಿ ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರಬೇಕು. ಇದೇ ಮಾನವ ಸಹಿತ ಬಾಹ್ಯಾಕಾಶ ಯಾನದ ತಂತ್ರಜ್ಞಾನ ಅಭಿವೃದ್ಧಿಯ ಪ್ರಮುಖ ಉದ್ದೇಶ ಎಂದು ತಿಳಿಸಿದರು.
ಭಾರತದ ಇತಿಹಾಸದಲ್ಲಿ 2023ರ ಆ.23 ಮಹತ್ವದ ಸಾಧನೆ ನೆನಪಿನ ಜತೆಗೆ ಭವಿಷ್ಯಕ್ಕೆ ಸಮರ್ಪಿಸಿಕೊಳ್ಳಲು, ಹೊಸ ಸಂಕಲ್ಪ ಕೈಗೊಳ್ಳಲು ಪ್ರೇರಣೆ ನೀಡುವ ದಿನವಾಗಿದೆ. ಇಸ್ರೋದ ಚಂದ್ರಯಾನ-3 ನೌಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಯಶಸ್ವಿಯಾಗಿ ಇಳಿದ ಐತಿಹಾಸಿಕ ದಿನದ ನೆನಪಿಗಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸುತ್ತೇವೆ ಎಂದು ತಿಳಿಸಿದರು.
ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಬಾಹ್ಯಾಕಾಶ ಸಂಸ್ಥೆಗಳ ಬೆಳವಣಿಗೆಯಿಂದಾಗಿ ಬಾಹ್ಯಾಕಾಶ ಯಾನ ಕ್ಷೇತ್ರದಲ್ಲಿ ಇಂದು ಜಾಗತಿಕವಾಗಿ ಮತ್ತು ಭಾರತೀಯ ಮಟ್ಟದಲ್ಲಿ ಉದ್ಯೋಗಾವಕಾಶ ಜತೆಗೆ ಉನ್ನತ ಅವಕಾಶಗಳು ಸೃಷ್ಟಿಯಾಗುತ್ತಿವೆ. ಬಾಹ್ಯಾಕಾಶ ವಿಷಯ ಅಧ್ಯಯನ ಮಾಡಿದವರಿಗೆ ದೇಶ-ವಿದೇಶಗಳಲ್ಲಿ ಬಹಳ ಬೇಡಿಕೆ ಇದೆ. ಅಲ್ಲದೆ, ಸ್ಟಾರ್ಟ್‌ಅಪ್ ಯೋಜನೆಗಳ ಮೂಲಕ ಉದ್ಯೋಗಿಯಾಗಲು ವೇದಿಕೆ ಒದಗಿಸಲಿದೆ. ವಿದ್ಯಾರ್ಥಿಗಳ ಅಚಲ ಗುರಿ ಬದುಕಿನ ದಾರಿ ಬದಲಾಯಿಸುತ್ತದೆ. ಹಾಗಾಗಿ ಸ್ಪಷ್ಟ ಗುರಿ ಹೊಂದಬೇಕು ಎಂದು ತಿಳಿಸಿದರು.
ಅಂತರಿಕ್ಷದಿಂದ ಕೈಗೊಳ್ಳಬೇಕಾದ ಕೆಲಸಗಳ ಜತೆಗೆ, ಮಾನವನನ್ನು ಕೇಂದ್ರವಾಗಿಟ್ಟುಕೊಂಡಂತಹ ವಿಶೇಷ ರೀತಿಯ ಇಂಜಿನಿಯರಿಂಗ್ ವ್ಯವಸ್ಥೆಯೂ ಅಗತ್ಯವಿದೆ. ಗಗನಯಾತ್ರಿಗಳ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಕ್ಷಮತೆ ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಪಡಿಸವೇಕಾಗುತ್ತದೆ. ವಾಸ್ತವದಲ್ಲಿ ಇದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ, ಅಭಿವೃದ್ಧಿ ಹಾಗೂ ಪ್ರಾಯೋಗಿಕ ಕಾರ್ಯಗಳು ನಡೆಯಬೇಕಾಗಿದೆ ಎಂದರು.
ಮುಕ್ತ ವಿವಿ ಕುಲಪತಿ ಪ್ರೊ.ಎ.ಪಿ.ಜ್ಞಾನಪ್ರಕಾಶ್, ಕುಲಸಚಿವ ಪ್ರೊಎಸ್.ಕೆ.ನವೀನ್‌ಕುಮಾರ್, ಸಿ.ಎಸ್.ಆನಂದಕುಮಾರ್, ಡೀನ್ ಪ್ರೊ.ಎಂ.ರಾಮನಾಥಂ ನಾಯ್ಡು , ಎನ್.ಆನಂದಗೌಡ, ಹಣಕಾಸು ಅಧಿಕಾರಿ ಪ್ರೊ.ಎಸ್.ನಿರಂಜನ್‌ರಾಜ್, ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಸ್.ವಿ.ನಿರಂಜನ ಇತರರು ಇದ್ದರು.