ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ  
ಮೈಸೂರು

ಯಾವುದೇ ಕಾರಣಕ್ಕೂ ಭಾರತ ಹಿಂದೂ ರಾಷ್ಟ್ರ ಆಗಬಾರದು : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಈ ದೇಶ ಹಿಂದೂ ರಾಷ್ಟ್ರ ಆಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ. ಹೀಗಾಗಿ ಹಿಂದೂ ರಾಷ್ಟ್ರಕ್ಕೆ ನಮ್ಮ ವಿರೋಧವಿದೆ. ನಾನು ಸಂವಿಧಾನಾತ್ಮಕವಾಗಿ ನನ್ನ ಮಾತು ಹೇಳಿದ್ದೇನೆ, ಅದು ಕೆಲವರಿಗೆ ಹಿಡಿಸದಿದ್ದರೆ ಅದು ನನ್ನ ತಪ್ಪಲ್ಲ ಹಿಂದೂ ರಾಷ್ಟ್ರ ಆಗಬಾರದು ಎಂಬ ನನ್ನ ನಿಲುವಿಗೆ ನಾನು ಈಗಲೂ ಬದ್ಧ ಎಂದು ಹೇಳಿದರು.

ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ತುಂಬುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಕಾಲುವೆಗಳಿಗೆ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಕಾಲುವೆಗಳಿಗೆ ನೀರು ಬಿಡುವ ವಿಚಾರದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚೆ ಮಾಡಿದ್ದಾರೆ. ಬೆಳೆಗಳಿಗೆ ನೀರು ನೀಡಬೇಕು ಎಂದಿದ್ದಾರೆ, ಶೀಘ್ರದಲ್ಲೇ ಕಾಲುವೆಗಳಿಗೂ ನೀರು ಬಿಡುತ್ತೇವೆ ಎಂದರು.

ನಗರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅದ್ದೂರಿಯ ಸ್ವಾಗತ ಕೋರಲಾಯಿತು. ನಂತರ ಅವರು ಶ್ರೀ ಉರಿಲಿಂಗಿಪೆದ್ದಿ ಮಠಕ್ಕೆ ಭೇಟಿ ನೀಡಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ. ಜಿಲ್ಲೆಯ ಹಲವು ಭಾಗಗಳಿಗೆ ಇಂದು ಭೇಟಿ ಕೊಡುತ್ತಿದ್ದೇನೆ ಎಂದು ಹೇಳಿದರು.