ವಿಶ್ವ ಹಾಲು ದಿನ ಅಂಗವಾಗಿ ಮೈಮುಲ್ ವತಿಯಿಂದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಸಿ.ಪ್ರಸಾದ್ ರೆಡ್ಡಿ, ಕೆ.ಎನ್.ಸುರೇಶ್ ನಾಯ್ಕ, ಸೌಮ್ಯಾ ಇನ್ನಿತರರಿದ್ದರು. 
ಮೈಸೂರು

ವಿಶ್ವದಲ್ಲೇ ಕ್ಷೀರ ಉತ್ಪಾದನೆಯಲ್ಲಿ ಭಾರತ ಪ್ರಥಮ

ಪ್ರಮುಖ ಮುಖ್ಯಾಂಶಗಳು

  • ಆಡಳಿತಾಧಿಕಾರಿ ಸಿ.ಪ್ರಸಾದ್ ರೆಡ್ಡಿ ಹೇಳಿಕೆ *
  • ಮೈಮುಲ್‌ನಿಂದ ವಿಶ್ವ ಹಾಲು ದಿನ ಆಚರಣೆ
ಮೈಸೂರು: ನಮ್ಮ ನಂದಿನಿ ನಮ್ಮ ಹೆಮ್ಮೆ, ನಂದಿನಿ ಹಾಲು ಬಳಸಿ ರೈತರ ಹಿತ ಕಾಪಾಡಿ, ಕ್ಷೀರಕ್ರಾಂತಿಯ ಪಿತಾಮಹ ಡಾ.ವರ್ಗೀಸ್ ಕುರಿಯನ್.... ಹೀಗೆ ವಿವಿಧ ನಾಮಫಲಕ ಹಿಡಿದು ಸಾರೋಟು ಹಾಗೂ ಬೈಕ್‌ಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ನಗರದಲ್ಲಿ ಸೋಮವಾರ ವಿಶ್ವ ಹಾಲು ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಆಲನಹಳ್ಳಿ ಬಡಾವಣೆಯಲ್ಲಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿಯಮಿತ (ಮೈಮುಲ್) ಕಚೇರಿಯಿಂದ ಜಾಗೃತಿ ಜಾಥಾ ಮೆರವಣಿಗೆ ಮೆರುಗು ನೀಡಿತು. ಇಲ್ಲಿಯಿಂದ ಬನ್ನೂರು ಮುಖ್ಯರಸ್ತೆ ಮಾರ್ಗವಾಗಿ ಟೆರೇಷಿಯನ್ ಕಾಲೇಜು ವೃತ್ತ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ನಜರ್‌ಬಾದ್ ಪೊಲೀಸ್ ಠಾಣೆ ಮಾರ್ಗವಾಗಿ ಕುಪ್ಪಣ್ಣ ಪಾರ್ಕ್‌ನಲ್ಲಿ ಮೆರವಣಿಗೆ ಅಂತ್ಯಗೊಂಡಿತು. 
ಏಳು ಸಾರೋಟಗಳಲ್ಲಿ ನಂದಿನ ಉತ್ಪನ್ನದ ಭಿತ್ತಿಪತ್ರದ ಮೂಲಕ ಹಾಲಿನ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ಮೈಮುಲ್ ಸಿಬ್ಬಂದಿ ಬೈಕ್‌ನಲ್ಲಿ ಮೆರವಣಿಗೆ ನಡೆಸಿದರು.
ಒಕ್ಕೂಟದ ಆಡಳಿತಾಧಿಕಾರಿ ಸಿ.ಪ್ರಸಾದ್ ರೆಡ್ಡಿ ಮಾತನಾಡಿ, 2001ರಿಂದ ವಿಶ್ವಾದ್ಯಂತ ವಿಶ್ವ ಹಾಲು ದಿನ ಆಚರಿಸಲಾಗುತ್ತಿದೆ. ಆರೋಗ್ಯವಾಗಿರಲು ಪೌಷ್ಟಿಕಾಂಶ ಮುಖ್ಯವಾಗಿದೆ. ಅಂತಹ ಪೌಷ್ಟಿಕಾಂಶ ಸಿಗಲು ಹಾಲು ಬಹುಮುಖ್ಯವಾಗಿದೆ. ಆರೋಗ್ಯವಾಗಿ ಇದ್ದಾಗ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿ. ಆದ್ದರಿಂದ ಎಲ್ಲೆಡೆ ಹಾಲು ದಿನ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರಲ್ಲೂ ಹಾಲಿನ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕೆಲವು ಖಾಸಗಿ ಸಂಘಟನೆಗಳಿಂದ ಹಾಲಿನ ಕಲಬೆರಕೆ ಆಗುತ್ತಿದೆ. ನಂದಿನಿಯಲ್ಲಿ ಶೇ.100 ಶುದ್ಧವಾಗಿದೆ. ಪ್ರಪಂಚದಲ್ಲೇ 3ನೇ ಬ್ರ್ಯಾಂಡ್ ಆಗಿ ಮಹತ್ವ ಪಡೆದಿದೆ. ವಿಶ್ವದಲ್ಲೇ ಅತಿಹೆಚ್ಚು ಹಾಲು ಉತ್ಪಾದನೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಈ ಸಾಲಿನ ವಿಶ್ವ ಹಾಲು ದಿನವನ್ನು ಮಹಿಳಾ ಸಬಲೀಕರಣ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.
ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ ಮಾತನಾಡಿ, ವಿಶ್ವಾದ್ಯಂತ ಹಾಲಿನ ಉತ್ಪಾದನೆ ಹೆಚ್ಚಳ ಆಗುತ್ತಿದೆ. ಹಾಲು ಉತ್ಪಾದನೆ ಮಾಡುವ ರೈತರ ಹಿತಾಸಕ್ತಿ ಕಾಪಾಡಬೇಕು. ಈ ನಿಟ್ಟಿನಲ್ಲಿ ಉತ್ಪಾದನೆಯಾದ ಹಾಲನ್ನು ಬಳಸುವುದಕ್ಕೆ ಜನರು ಮುಂದಾಗಬೇಕು. ಹಾಲು ಒಂದು ಸಂಪೂರ್ಣ ಆಹಾರವಾಗಿದೆ. ಹಾಲಿನಲ್ಲಿ ದೇಹಕ್ಕೆ ಬೇಕಾದ ಎಲ್ಲ ರೀತಿಯ ಅಂಶಗಳು ಇವೆ. ಒಂದೊಂದು ಧಾನ್ಯದಲ್ಲಿ ಒಂದೊಂದು ವಿಟಮಿನ್ ಇದೆ. ಆದರೆ, ಹಾಲಿನಲ್ಲಿ ಸಂಪೂರ್ಣ ವಿಟಮಿನ್‌ಗಳಿರುತ್ತವೆ. ಎಲ್ಲ ಪೋಷಕಾಂಶಗಳು ಒಟ್ಟಾಗಿರುವ ಕಾರಣಕ್ಕಾಗಿ ಹಾಲನ್ನು ಒಂದು ಸಂಪೂರ್ಣ ಗುಣಮಟ್ಟದ ಆಹಾರ ಆಗಿದೆ ಎಂದರು.
ಜಿಲ್ಲಾದ್ಯಂತ 5.50 ಲಕ್ಷ ಜಾನುವಾರು ಹಾಲಿನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ. ಗ್ರಾಮಾಂತರ ಭಾಗದಲ್ಲಿ ಮೊದಲು ಮನೆ ಹಾಗೂ ಸ್ಥಳೀಯವಾಗಿ ಬಳಸಿಕೊಂಡು ಉಳಿದಿದ್ದನ್ನು ಮಾರುಕಟ್ಟೆಗೆ ನೀಡುತ್ತಾರೆ. ನಗರ ಪ್ರದೇಶದಲ್ಲಿ ಉತ್ಪಾದನೆಯಾದ ಹಾಲನ್ನು ನೇರವಾಗಿ ಮಾರುಕಟ್ಟೆಗೆ ನೀಡುತ್ತಾರೆ ಎಂದರು.
ಆರ್‌ಸಿಬಿ ಕ್ರಿಕೆಟ್ ತಂಡವು ನಮ್ಮ ನಂದಿನಿ ಪ್ರಾಯೋಜಕತ್ವ ಬಳಸಿಕೊಂಡ ಬಳಿಕ ಅದಕ್ಕೆ ಅದೃಷ್ಟ ಹೆಚ್ಚಾಗಿ ವಿಜಯಶಾಲಿಯಾಗಿದ್ದು, ಇದರ ಗೆಲುವಿನ ಶಕ್ತಿ ಹಿಂದೆ ನಂದಿನಿಯ ಶಕ್ತಿಯಿದೆ ಎಂದು ಹೇಳಿದರು.
ಮೈಮುಲ್ ಆಡಳಿತ ವಿಭಾಗ ಮ್ಯಾನೇಜರ್ ಸೌಮ್ಯಾ ಮಾತನಾಡಿ, ಹೆಚ್ಚು ನಂದಿನಿ ಉತ್ಪನ್ನಗಳನ್ನು ಬಳಸಿದಷ್ಟು ರೈತರ ಹಿತ ಕಾಪಾಡಿದಂತಾಗಲಿದೆ. ನಮ್ಮಲ್ಲಿ 300ಕ್ಕೂ ಹೆಚ್ಚು ಮಹಿಳಾ ಸೊಸೈಟಿಗಳು ನಡೆಸುತ್ತಿರುವುದೇ ಮಹಿಳಾ ಸಬಲೀಕರಣಕ್ಕೆ ಉದಾಹರಣೆಯಾಗಿದೆ. ಮೈಸೂರು ಡೇರಿಯಲ್ಲೂ ಸಹ ಹೆಚ್ಚು ಮಹಿಳಾ ಸಿಬ್ಬಂದಿ ಇದ್ದಾರೆ. ಅದೇ ರೀತಿ ಸಮಾಜದ ಎಲ್ಲ ಕಡೆಗಳಲ್ಲೂ ಮಹಿಳಾ ಸ್ವಾವಲಂಬನೆಯಾಗಬೇಕು ಎಂದು ಹೇಳಿದರು.