ವಿಶ್ವದಲ್ಲಿ 63.5 ಲಕ್ಷ ಟನ್ ಥೋರಿಯಂ ಲಭ್ಯವಿದ್ದು, ಭಾರತದಲ್ಲಿ 8.46 ಲಕ್ಷ ಟನ್ ನಿಕ್ಷೇಪವಿದೆ. ಹೀಗಾಗಿ ಭಾರತವು ಮುಂದಿನ ಶತಮಾನದ ವೇಳೆಗೆ ನಿರ್ಣಾಯಕವಾಗಲಿದೆ ಎಂದು ಬಾಬಾ ಪರಮಾಣು ಸಂಶೋಧನಾ ಕೇಂದ್ರದ ನಿವೃತ್ತ ವಿಜ್ಞಾನಿ ಪ್ರೊ.ವಿ.ಕೆ.ಮನ್‌ಚಂದ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಲ್ಕನೇ ಪೀಳಿಗೆಯ ಅಣುಶಕ್ತಿ ತಂತ್ರಜ್ಞಾನ ಕಾರ್ಯಾಚರಿಸಲು ಸಿದ್ಧತೆ ನಡೆದಿದೆ. ವಿಕಿರಣ ಸೂಸುವ ಅಣು ತ್ಯಾಜ್ಯ ನಿರ್ವಹಣೆಯನ್ನು ಮಾಡಲಾಗುತ್ತಿದೆ. ಥೋರಿಯಂ ನಿಕ್ಷೇಪ ದೇಶದಲ್ಲಿ ಹೇರಳವಾಗಿದ್ದು, ಅಣು ವಿದ್ಯುತ್ ರಿಯಾಕ್ಟರ್‌ಗಳಲ್ಲಿ ಬಳಸುವ ಮೂಲಕ ಭಾರತ ಜಾಗತಿಕ ಶಕ್ತಿಯಾಗಿ ಹೊಮ್ಮಲಿದೆ ಎಂದರು.
ದೇಶದ ಪರಮಾಣು ಶಕ್ತಿಯನ್ನು ವಿದ್ಯುತ್ ಉತ್ಪಾದನೆ ಹಾಗೂ ರಕ್ಷಣಾ ಬಳಕೆಗೆ ಮಾತ್ರವಲ್ಲದೆ, ಆರೋಗ್ಯ, ಕೃಷಿ, ವಿಕಿರಣ ತಂತ್ರಜ್ಞಾನ, ಆಹಾರ ಮತ್ತು ಗುಣಮಟ್ಟ ಕಾಪಾಡಲು, ಶುದ್ಧ ನೀರು, ಕೈಗಾರಿಕೆ, ಲೇಸರ್ ತಂತ್ರಜ್ಞಾನಕ್ಕೆ ಬಳಸಬಹುದು. ಕೃಷಿ ಇಳುವರಿ ಹೆಚ್ಚಿಸಲು ಬಿತ್ತನೆ ಬೀಜ ಸಂವರ್ಧನೆಗೆ (ಮ್ಯೂಟೇಶನ್) ಬಳಕೆ ಮಾಡಬಹುದು ಎಂದರು.
ಅತ್ಯಾಧುನಿಕ ಪರಮಾಣು ತಂತ್ರಜ್ಞಾನವನ್ನು ಕಳೆದ 7 ದಶಕಗಳಲ್ಲಿ ದೇಶ ಅಭಿವೃದ್ಧಿಪಡಿಸಿದೆ. ದೇಶವು 2047ರ ವೇಳೆಗೆ 100 ಗಿಗಾವಾಟ್ ಅಣು ವಿದ್ಯುತ್ ಶಕ್ತಿ ತಯಾರಿಸುವ ಗುರಿ ಹಾಕಿಕೊಂಡಿದೆ. ಪ್ರಸ್ತುತ ಒಟ್ಟು ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಶೇ.2ರಷ್ಟು ಮಾತ್ರವೇ ಪರಮಾಣು ಶಕ್ತಿಯ ಪಾಲಿದ್ದು, 20 ವರ್ಷಗಳಲ್ಲಿ ಶೇ.9ಕ್ಕೆ ಏರಲಿದೆ ಎಂದು ಹೇಳಿದರು.
ಏಷ್ಯಾದ ಮೊದಲ ಅಣುಶಕ್ತಿ ಕೇಂದ್ರವು ಮಹಾರಾಷ್ಟ್ರದ ಟ್ರಾಂಬೆಯಲ್ಲಿ ಸ್ಥಾಪನೆಯಾಯಿತು. 22 ರಿಯಾಕ್ಟರ್‌ಗಳು ಸದ್ಯ ಕಾರ್ಯಾಚರಿಸುತ್ತಿವೆ. ದೇಶದ ಜನಸಂಖ್ಯೆ ಹೆಚ್ಚುತ್ತಿದ್ದು, 24 ಗಂಟೆಯೂ ನಿಯಮಿತವಾಗಿ ವಿದ್ಯುತ್ ಉತ್ಪಾದಿಸುವ ಶೂನ್ಯ ಇಂಗಾಲದ ಶಕ್ತಿ ಮೂಲಗಳು ಅಗತ್ಯವಾಗಿವೆ. ದೇಶವು 2030ರ ವೇಳೆಗೆ 500 ಗಿಗಾವಾಟ್ ಪಳೆಯುಳಿಕೆ (ಫಾಸಿಲ್) ಇಂಧನ ರಹಿತ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹಾಕಿಕೊಂಡಿದೆ ಎಂದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ಎಂ.ಕೆ.ಸವಿತಾ ಇದ್ದರು.