ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಮತ್ತು ಡಾ.ಮೊಗಳ್ಳಿ ಗಣೇಶ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಡಾ.ಎಂ.ಎಸ್.ಶೇಖರ್, ಡಾ.ಎಂ.ಎಸ್. ವಿಜಯಾ ಹರನ್, ಡಾ.ಎಂ.ಎಸ್.ಅನಿತಾ, ಹರೀಶ ಗೌಡ, ಡಾ.ಡಿ.ಸುಂದರಿ, ಡಾ.ಎಚ್.ಆರ್. ಚಂದ್ರಕಲಾ ಇನ್ನಿತರರಿದ್ದರು 
ಮೈಸೂರು

ಪ್ರಶಸ್ತಿಗಾಗಿ ಲಾಬಿ ಮಾಡುವ ಪ್ರವೃತ್ತಿ ಹೆಚ್ಚಳ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಸಾಧನೆಗೆ ಪುರಸ್ಕಾರ ಮಾನದಂಡವಲ್ಲ
  • ಲ್ಲರಿಗೂ ಎಲ್ಲ ಪ್ರಶಸ್ತಿಗಳು ಗಿಟ್ಟಿಸಿಕೊಳ್ಳಬೇಕು ಎಂಬುದು ಸರಿಯಲ್ಲ.
  • ಸಾಹಿತಿಗಳಾದ ಡಾ.ಎಸ್.ಎಲ್.ಭೈರಪ್ಪ ಮತ್ತು ಡಾ.ಮೊಗಳ್ಳಿ ಗಣೇಶ್ ಅವರಿಗೆ ನುಡಿನಮನ
ಮೈಸೂರು: ಹಣ ಕೊಟ್ಟು ಪ್ರಶಸ್ತಿ ತೆಗೆದುಕೊಳ್ಳುವುದು, ಅದಕ್ಕಾಗಿ ತೆರೆಮರೆಯಲ್ಲಿ ಲಾಬಿ ಮಾಡುವ ಕೆಟ್ಟ ಪ್ರವೃತ್ತಿ ಹೆಚ್ಚಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕಲಾ ನಿಕಾಯ ಡೀನ್ ಹಾಗೂ ಸಾಹಿತಿ ಡಾ.ಎಂ.ಎಸ್.ಶೇಖರ್ ಕಳವಳ ವ್ಯಕ್ತಪಡಿಸಿದರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಹಿತಿಗಳಾದ ಡಾ.ಎಸ್.ಎಲ್.ಭೈರಪ್ಪ ಮತ್ತು ಡಾ.ಮೊಗಳ್ಳಿ ಗಣೇಶ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಶಸ್ತಿಗಳು ಸಾಧಕನನ್ನು ಹುಡುಕಿಕೊಂಡು ಬರಬೇಕೇ ಹೊರತು ಅದರ ಹಿಂದೆ ಹೋಗಬಾರದು. ಎಲ್ಲರಿಗೂ ಎಲ್ಲ ಪ್ರಶಸ್ತಿಗಳು ಗಿಟ್ಟಿಸಿಕೊಳ್ಳಬೇಕು ಎಂಬುದು ಸರಿಯಲ್ಲ. ತಮ್ಮ ಪಾಡಿಗೆ ಅಕ್ಷರ ಕೃಷಿ ಮಾಡಿಕೊಂಡು ಮುನ್ನಡೆಯಬೇಕು. ಆಗಲೇ ಅರ್ಹ ಕೃತಿಗಳಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ. ಅದೇ ಘನತೆ ಮತ್ತು ಗೌರವವನ್ನು ತಂದುಕೊಡುತ್ತದೆ. ಆದರೀಗ ಪರಿಸ್ಥಿತಿ ಬೇರೆಯೇ ಇದೆ ಎಂದರು.
ಆದರೀಗ ಪ್ರಶಸ್ತಿ ಕೊಡುವುದು, ಅದನ್ನು ತೆಗೆದುಕೊಳ್ಳುವುದು ಹಾಗೂ ಹಣ ಕೊಟ್ಟು ಪ್ರಶಸ್ತಿ ಪಡೆಯುವುದು ಎದ್ದು ಕಾಣುತ್ತಿದೆ ಎಂದರು.
ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿ, ದೇವನೂರ ಮಹಾದೇವ ಅವರು ಯಾವುದೇ ಪ್ರಶಸ್ತಿಗಾಗಿ ಹಾತೊರೆಯಲಿಲ್ಲ. ಅವರು ಜ್ಞಾನಪೀಠ ಪ್ರಶಸ್ತಿಯನ್ನು ಮೀರಿದವರು. ಆದರೆ, ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತು ಎಂದರು. ದಿವಂಗತರಾದ ಮೊಗಳ್ಳಿ ಗಣೇಶ್, ಪ್ರೊ.ಎಸ್.ಎಲ್.ಭೈರಪ್ಪ ಅವರನ್ನು ಸ್ಮರಿಸಿ, ಅವರ ಕೆಲಸ ಕಾರ್ಯಗಳನ್ನು ಮೆಲುಕು ಹಾಕಿದರು.
ಮೈಸೂರು ಆಕಾಶವಾಣಿಯ ನಿವೃತ್ತ ನಿರ್ದೇಶಕಿ, ಸಾಹಿತಿ ಡಾ.ಎಂ.ಎಸ್. ವಿಜಯಾ ಹರನ್ ಮಾತನಾಡಿದರು. ಪ್ರಾಂಶುಪಾಲೆ ಡಾ.ಎಂ.ಎಸ್. ಅನಿತಾ, ಕನ್ನಡ ವಿಭಾಗದ ಮುಖ್ಯಸ್ಥ ಹರೀಶಗೌಡ, ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ಡಿ. ಸುಂದರಿ, ಪ್ರಾಧ್ಯಾಪಕರಾದ ಡಾ.ಎಚ್.ಆರ್. ಚಂದ್ರಕಲಾ, ಎ.ಎಂ.ನಾಗೇಂದ್ರಪ್ರಸಾದ್, ಎಂ.ಜಿ.ಮುಜಾಹಿದ್ ಪಾಷ, ಪತ್ರಾಂಕಿತ ವ್ಯವಸ್ಥಾಪಕ ಕೆ. ವೆಂಕಟೇಶ್ ಇನ್ನಿತರರಿದ್ದರು.