ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷ ಅಭಯ್ ಮನೋಹರ್ ಸಪ್ರೆ ರಸ್ತೆ ಸುರಕ್ಷತಾ ಸಮಿತಿ ಸಭೆ ನಡೆಸಿದರು. ಜಿ.ಲಜ್ಷ್ಮೀಕಾಂತ್ ರೆಡ್ಡಿ, ಸೀಮಾ ಲಾಟ್ಕರ್, ವಿಷ್ಣುವರ್ಧನ್ ಹಾಗೂ ಇತರರು ಇದ್ದರು.
ಮೈಸೂರು: ಪ್ರತಿ ಜೀವ ಅಮೂಲ್ಯ, ರಸ್ತೆ ಅಪಘಾತಗಳ ಸಂಖ್ಯೆ ಶೂನ್ಯವಾಗುವುದು ಗುರಿಯಾಗಬೇಕು ಎಂದು ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷ ಅಭಯ್ ಮನೋಹರ್ ಸಪ್ರೆ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುದ್ಧಗಳು ಉದ್ದೇಶಪೂರಿತವಾಗಿ ನಡೆದು ಹಲವರು ಜನರು ಸವಾನ್ನಪ್ಪುತ್ತಾರೆ. ರಸ್ತೆ ಅಪಘಾತದಲ್ಲಿ ಯಾವುದೇ ಉದ್ದೇಶವಿಲ್ಲದೆ ಅಂದಾಜು ದೇಶದಲ್ಲಿ ಪ್ರತಿ ವರ್ಷ ಅಂದಾಜು 2 ಲಕ್ಷ ಜನರು ಮೃತಪಡುತ್ತಿದ್ದಾರೆ. ಇದು ಚಿಂತಿಸುವ ವಿಷಯವಾಗಿದೆ ಎಂದರು.
ಹೆಲ್ಮೆಟ್ ಹಾಗೂ ಸೀಟ್‌ಬೆಲ್ಟ್ ಧರಿಸದೇ ಇರುವುದು, ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ರಸ್ತೆ ಅಪಘಾತ ಹಾಗೂ ರಸ್ತೆ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ. ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕು ಎಂಬುವುದು ಸಾಮಾನ್ಯ ಜ್ಞಾನ, ಇದಕ್ಕೆ ಯಾವುದೇ ಪದವಿ ಬೇಡ. ವಿದ್ಯಾವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಸೀಟ್‌ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸದೆ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ ಎಂದರು.
ಸಂಚಾರ ನಿಯಮ ಪಾಲನೆಯ ವಿಚಾರದಲ್ಲಿ ಸಾರ್ವಜನಿಕರ ಮನಸ್ಥಿತಿ ಬದಲಾಗಬೇಕು. ಇದಕ್ಕೆ ಜಾಗೃತಿ ಮೂಡಿಸುವ ಜತೆಗೆ ಪೊಲೀಸರು ಕಟ್ಟುನಿಟ್ಟನ ಸಂಚಾರ ನಿಯಮ ಜಾರಿಗೊಳಿಸಬೇಕು. ಕಳೆದ 5 ವರ್ಷಗಳಿಂದ ರಸ್ತೆ ಅಪಘಾತದಲ್ಲಿ ದೇಶದಲ್ಲಿ ಕರ್ನಾಟಕ 5 ಹಾಗೂ ಮೈಸೂರು ಜಿಲ್ಲೆ 10ನೇ ಸ್ಥಾನದೊಳಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ರಸ್ತೆಗಳ ಗುಂಡಿಗಳು ಮತ್ತು ಬ್ಲ್ಯಾಕ್ ಸ್ಪಾಟ್ ಉಂಟಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಮೈಸೂರು ಪ್ರವಾಸಿ ತಾಣವಾಗಿದ್ದು, ಖಾಸಗಿ ಬಸ್‌ಗಳ ಸಂಚಾರ ಹೆಚ್ಚಿರುತ್ತದೆ. ಖಾಸಗಿ ಬಸ್‌ಗಳು ಉತ್ತಮ ಸ್ಥಿತಿಯಲ್ಲಿರುವ ಬಗ್ಗೆ ಹಾಗೂ ಸರ್ಕಾರ ವಿಧಿಸಿರುವ ನಿಯಮಗಳ ಪಾಲನೆ, ವಾಹನ ಚಾಲಕರ ಪರವಾನಗಿ ಹಾಗೂ ವಾಹನ ವಿಮೆಯ ಬಗ್ಗೆ ನಿಗದಿತವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದರು.
ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ರಸ್ತೆ ಅಪಘಾತ ಸಂಭವಿಸಿ ಜನರು ಮೃತಪಡುತ್ತಿದ್ದಾರೆ. ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದಲ್ಲೂ ಆಯೋಜಿಸಬೇಕು. ಜಾಗೃತಿ ಮೂಡಿಸಲು ಹೆಚ್ಚಿನ ಜನರನ್ನು ಆಕರ್ಷಿಸುವ ರೀತಿ ತಾಂತ್ರಿಕ ಸಂಚಾರ ಪಾರ್ಕ್ ನಿಇರ್ಮಸಿ ಎಂದು ಸಲಹೆ ನೀಡಿದರು.
ಸರ್ಕಾರಿ ಕಚೇರಿಗಳು, ದೊಡ್ಡ ಕಂಪನಿಗಳು, ಶಾಲಾ ಕಾಲೇಜುಗಳಿಗೆ ದ್ವಿಚಕ್ರದಲ್ಲಿ ಬರುವ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸಂಬಂಧಿಸಿದ ಸಂಸ್ಥೆಯ ಮುಖ್ಯಸ್ಥರ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವಂತೆ ಮಾಡಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಲಜ್ಷ್ಮೀಕಾಂತ್ ರೆಡ್ಡಿ ಅವರು 2020 ರಿಂದ 2025ರವರೆಗೆ ಜಿಲ್ಲೆಯಲ್ಲಿ ಸಂಭವಿಸಿರುವ ರಸ್ತೆ ಅಪಘಾತಗಳು, ಮರಣ ಹೊಂದಿದವರ ಸಂಖ್ಯೆ, ಗುರುತಿಸಿರುವ ಬ್ಲ್ಯಾಕ್ ಸ್ಪಾಟ್‌ಗಳು ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರು ನಗರದ ಮುಖ್ಯ ಭಾಗಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಹಾಗೂ ಹೆಚ್ಚಿನ ಅಪಘಾತಗಳಾಗುವ ರಸ್ತೆಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್ ಹಾಗೂ ಇತರರು ಇದ್ದರು.