ಜಿಲ್ಲಾಧಿಕಾರಗಳ ಕಚೇರಿ ಸಭಾಂಗಣದಲ್ಲಿ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಮಟ್ಟದ ಜಿಲ್ಲಾ ಸಮಿತಿ ಸಭೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. ಸುಂದರ್‌ರಾಜ್, ನಾಗರಾಜ್ ನಾಯಕ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಮೈಸೂರು: ಮಾದಕ ವಸ್ತು ಸಾಗಣೆ, ಮಾರಾಟ ಜಾಲ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕ್ ಹೇಳಿದರು.
ಜಿಲ್ಲಾಧಿಕಾರಗಳ ಕಚೇರಿ ಸಭಾಂಗಣದಲ್ಲಿಹಮ್ಮಿಕೊಂಡಿದ್ದ ನಾರ್ಕೋ ಸಮನ್ವಯ ಕೇಂದ್ರದ ಜಿಲ್ಲಾ ಮಟ್ಟದ ಜಿಲ್ಲಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ನಡೆಸಬೇಕು. ಕಾಲೇಜುಗಳ ಹತ್ತಿರ ಇರುವ ಅಂಗಡಿಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುವ ಸಂಭವ ಹೆಚ್ಚಾಗಿದ್ದು, ಅಂತಹ ಕಡೆಗಳಲ್ಲಿ ಹೆಚ್ಚು ಗಮನ ನೀಡಬೇಕು. ಶಾಲಾ, ಕಾಲೇಜುಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದರ ಜತೆಗೆ ಗ್ರೇ ಏರಿಯಾಗಳು ಇರುವಂತಹ ಕಡೆ ಶಿಕ್ಷಕರು ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
ಶಾಲಾ, ಕಾಲೇಜುಗಳ ಹತ್ತಿರ, ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವಸ್ತುಗಳಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ಮಾಹಿತಿ ಇರುವ ಬ್ಯಾನರ್‌ಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಮಾದಕ ವಸ್ತುಗಳ ಬಳಕೆ ನಿಷೇಧ ಮಾಡುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಮಾದಕ ವಸ್ತುಗಳ ಕಳ್ಳ ಸಾಗಣೆ ಹಾಗೂ ಮಾದಕ ವಸ್ತುಗಳ ಜಾಲ ನಡೆಯುತ್ತಿರುವುದರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರ ಜತೆಗೂಡಿ ತನಿಖೆ ನಡೆಸುವುದು ಸೂಕ್ತ. ಹೊಸ ವರ್ಷ ಆಚರಣೆಯಲ್ಲಿ ಯಾವುದೇ ಮಾದಕ ವಸ್ತುಗಳು ಬಳಕೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಡಿಸಿಪಿ ಸುಂದರ್ ರಾಜ್, ಎಎಸ್‌ಐ ನಾಗರಾಜ್ ನಾಯಕ್, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.