ನನ್ನವ್ವ ಸಾಂಸ್ಕೃತಿಕ ಕಲಾತಂಡವು ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆದರ್ಶ ದಂಪತಿಗಳನ್ನು ಸನ್ಮಾನಿಸಲಾಯಿತು. ಬಿ. ಹರ್ಷವರ್ಧನ್, ನಾಗರಾಜ ವಿ.ಬೈರಿ, ಮಡ್ಡೀಕೆರೆ ಗೋಪಾಲ್, ಅಂಶಿ ಪ್ರಸನ್ನಕುಮಾರ್, ನ.ಗಂಗಾಧರಪ್ಪ, ಪ್ರಭಾಶಾಸ್ತ್ರೀ ಜೋಶ್ಯುಲ ಇತರರು ಇದ್ದರು. 
ಮೈಸೂರು

ಪಾಶ್ಚಾತ್ಯ ಸಂಸ್ಕೃತಿ ಅನುಕರಣೆಯಿಂದ ವಿಚ್ಛೇದನ ಹೆಚ್ಚಳ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಬಿ.ಹರ್ಷವರ್ಧನ್ ಕಳವಳ
  • ನನ್ನವ್ವ ಸಾಂಸ್ಕೃತಿಕ ಕಲಾತಂಡದಿಂದ ಸಂವಾದ
ಸುದೀರ್ಘ ಕಾಲ ದಾಂಪತ್ಯ ಜೀವನ ನಡೆಸುವ ಭಾರತೀಯರನ್ನು ಕಂಡು ವಿದೇಶಿಯರು ಅಚ್ಚರಿ ಪಡುತ್ತಿದ್ದರು. ಹೀಗಿರುವಾಗ ನಾವು ಅವರ ಸಂಸ್ಕೃತಿಯನ್ನು ಅನುಸರಿಸಲು ಹೋಗುತ್ತಿದ್ದೇವೆ. ಹಾಗಾಗಿ, ವಿಚ್ಛೇದನ ಪ್ರಕರಣಗಳು ಹೆಚ್ಚಾಗಲು ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಕಾರಣ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.
ತಿ.ನರಸೀಪುರ ತಾಲೂಕು ಯಾಚೇನಹಳ್ಳಿಯ ನನ್ನವ್ವ ಸಾಂಸ್ಕೃತಿಕ ಕಲಾತಂಡವು ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಏರ್ಪಡಿಸಿದ್ದ ‘ಹೆಚ್ಚಾದ ವಿಚ್ಛೇದನ ಕುರಿತ ಸಂವಾದ’ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿಯಲ್ಲಿ ಮದುವೆ ಎಂಬುದು ಬಹಳ ಪವಿತ್ರವಾದುದು. ಇದರ ಗಂಭೀರತೆ ಅರಿತು, ಮದುವೆಯ ಮೌಲ್ಯ ಕಾಪಾಡಬೇಕು. ಪರಸ್ಪರ ನಂಬಿಕೆಯಿಂದ ಜತೆಯಾಗಿ ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.
ಹಿಂದೆ ಮೊಬೈಲ್, ಟಿವಿಗಳಿರಲಿಲ್ಲ. ಹೀಗಾಗಿ ಸುಲಭವಾಗಿ ಸಂಪರ್ಕಿಸಲು ಆಗುತ್ತಿರಲಿಲ್ಲ. ಆದರೆ ಈಗ ಸಂಪರ್ಕದಿಂದಾಗಿ ಸಂಬಂಧಗಳು ಹಾಳಾಗುತ್ತಿವೆ. ಅಂತರ ಜಾತಿ ವಿವಾಹವಾದಾಗ ಎರಡು ಕಡೆಯ ಕುಟುಂಬಗಳ ಬೆಂಬಲ ಇರುವುದಿಲ್ಲ. ಆ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದಲ್ಲಿ ವಿಚ್ಛೇದನ ಮತ್ತಿತರ ಸಮಸ್ಯೆಗಳು ಉಂಟಾಗುತ್ತವೆ. ಈಗ ಸೊಸೆಯಾದವರು ಮುಂದೆ ಅತ್ತೆಯಾಗುತ್ತಾರೆ. ಈಗ ಅಳಿಯ ಆದವನು ಮುಂದೆ ಮಾವ ಆಗುತ್ತಾನೆ ಎಂದು ಅರಿಯಬೇಕು ಎಂದು ತಿಳಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಬೈರಿ ಮಾತನಾಡಿ, ನೈತಿಕ ಮೌಲ್ಯಗಳು ಇಲ್ಲದಿರುವುದೇ ವಿಚ್ಛೇದನ ಹೆಚ್ಚಾಗಲು ಕಾರಣವಾಗಿದೆ. ಆದ್ದರಿಂದ ಶಾಲಾ ಪಠ್ಯದಲ್ಲಿ ನೈತಿಕ ಮೌಲ್ಯ ಕುರಿತ ಅಂಶಗಳನ್ನು ಸೇರಿಸಬೇಕು ಎಂದು ಸಲಹೆ ನೀಡಿದರು.
ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಅರಿತರೆ ಸಮಸ್ಯೆಗಳು ಬರುವುದಿಲ್ಲ. ಸುಖವಾಗಿ ಜೀವನ ನಡೆಸಬಹುದು ಎಂದರು.
‘ಹೊಂದಾಣಿಕೆಯ ಜೀವನ’ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ವಿಷಯ ಮಂಡಿಸಿದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ವಿಶೇಷ ಅತಿಥಿಯಾಗಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನ.ಗಂಗಾಧರಪ್ಪ, ಸಾಹಿತಿ ಪ್ರಭಾಶಾಸ್ತ್ರೀ ಜೋಶ್ಯುಲ ಅವರು ಸಂವಾದ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. ಕೋಮಲಾ ನಾಗರಾಜು ಮೊದಲಾದವರು ಇದ್ದರು.
ಆದರ್ಶ ದಂಪತಿಗಳಾದ ಮೈಸೂರಿನ ಎಸ್.ಜೆ. ಸ್ವರ್ಣಾ- ಎಂ. ಮೋಹನಕುಮಾರ್, ಹೆಗ್ಗೂರಿನ ಸಿ. ಮಮತಾ- ಸತೀಶ್, ಯಾಚೇನಹಳ್ಳಿಯ ವೈ.ಎಸ್. ಯಶೋದಾ- ವೈ.ಕೆ. ಚಂದ್ರು, ನಾಗಲಗೆರೆಯ ಯಶೋದಾ- ಸೋಮಣ್ಣ, ದೇಶವಳ್ಳಿಯ ಜಯಮ್ಮ- ರಾಜಶೇಖರ ನಾಯಕ, ನಂಜನಗೂಡಿನ ರಂಜನಾ- ಎಸ್.ಲಕ್ಷ್ಮೀಶ್, ಆಗತ್ತೂರಿನ ಬಿ. ಸುಮಾ- ಪಿ. ಜವರನಾಯಕ ಅವರನ್ನು ಸನ್ಮಾನಿಸಲಾಯಿತು.