ತಿ.ನರಸೀಪುರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಶಾಲಾ ದಾಖಲಾತಿ ಆಂದೋಲನಕ್ಕೆ ಉದಯ್ ಕುಮಾರ್ ಚಾಲನೆ ನೀಡಿದರು. ಎಸ್.ಸಿ.ಶಿವಮೂರ್ತಿ, ನಾಗೇಶ್ ಗಂಗವಾಡಿ, ಶಿಕ್ಷಕರ ಸಂಘದ ಅಧ್ಯಕ್ಷ ಎ.ಗಜೇಂದ್ರ, ಸುಬ್ರಹ್ಮಣ್ಯ, ಕುಪ್ಯ ಪುಟ್ಟಸ್ವಾಮಿ, ನಂದಿನಿ, ಬಸವರಾಜು, ರಾಯಪ್ಪ ಗೌಂಡಿ ಇದ್ದರು.
ತಿ.ನರಸೀಪುರ: ಸರ್ಕಾರಿ ಶಾಲೆಗಳ ಅಸ್ತಿತ್ವವನ್ನು ಉಳಿಸಲು ಶಿಕ್ಷಕರು ದಾಖಲಾತಿ ಪ್ರಮಾಣವನ್ನು ಹೆಚ್ಚು ಮಾಡುವುದರ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಉದಯ್ ಕುಮಾರ್ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ದಾಖಲಾತಿ ಆಂದೋಲನ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಮಾಡಲಾಗುತ್ತಿದೆ ಎಂದರು.
ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಒಂದು ತಿಂಗಳ ಕಾಲ ಪ್ರತಿ ಗ್ರಾಮದಲ್ಲೂ ದಾಖಲಾತಿ ಆಂದೋಲನದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚು ಮಕ್ಕಳನ್ನು ಶಾಲೆಗೆ ದಾಖಲಿಸಿ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಸರ್ಕಾರದಿಂದ ಮಕ್ಕಳಿಗೆ ಸಿಗುವ ಸೌಲಭ್ಯಗಳನ್ನು ಸಕಾಲದಲ್ಲಿ ದೊರಕಿಸಿಕೊಡುವ ಕೆಲಸಗಳನ್ನು ಇಲಾಖೆ ಮಾಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮವಾಗಿದ್ದು, ಫಲಿತಾಂಶದ ಗುಣಮಟ್ಟವನ್ನು ಹೆಚ್ಚಿಸಲು ತಳ ಹಂತದಲ್ಲಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಬೇಕು. ಮತ್ತಷ್ಟು ಹೊಸ ಕಾರ್ಯಕ್ರಮಗಳ ಮೂಲಕ ರೂಪಿಸಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ. ಉತ್ತಮ ಫಲಿತಾಂಶ ನೀಡಿದ ಶಿಕ್ಷಣಾಧಿಕಾರಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದಿಸುವುದಾಗಿ ಅವರು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಂತೆ ಹಾಗೂ ಸರ್ಕಾರಿ ಶಾಲೆಗಳು ಮುಚ್ಚದಂತೆ ಶಿಕ್ಷಕರು ತಮ್ಮ ವ್ಯಾಪ್ತಿಯ ಗ್ರಾಮಗಳ ಪಾಲಕರನ್ನು ಮನವೊಲಿಸಿ ಶಾಲೆಗೆ ಸೇರಿಸಲು ಕ್ರಮವಹಿಸಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ. ಮಕ್ಕಳು ಶಾಲೆಯಿಂದ ಹೊರ ಉಳಿಯದಂತೆ ಶಿಕ್ಷಕರು ಗಮನಹರಿಸಬೇಕು ಎಂದರು.
ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್ ಮೂರ್ತಿ, ಕ್ಷೇತ್ರ ಸಮನ್ವಯ ಸಂಪನ್ಮೂಲ ಅಧಿಕಾರಿ ನಾಗೇಶ್ ಗಂಗವಾಡಿ, ಶಿಕ್ಷಕರ ಸಂಘದ ಅಧ್ಯಕ್ಷ ಎ.ಗಜೇಂದ್ರ, ಸುಬ್ರಹ್ಮಣ್ಯ, ಕುಪ್ಯ ಪುಟ್ಟಸ್ವಾಮಿ, ನಂದಿನಿ, ಬಿಆರ್‌ಪಿ ಬಸವರಾಜು, ತುಂಬಲ ಮುಖ್ಯ ಶಿಕ್ಷಕ ರಾಯಪ್ಪ ಗೌಂಡಿ, ಜಿಲ್ಲಾ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಡಯಟ್ ಉಪನ್ಯಾಸಕ ಚನ್ನಪ್ಪ, ಕಿಕ್ಕೇರಿ ಶೆಟ್ಟಿ, ಬಿಆರ್‌ಪಿ ಟಿ.ಪಿ.ಮಹದೇವಸ್ವಾಮಿ, ವೆಂಕಟೇಶ್, ಅಕ್ಕಮಹಾದೇವಿ, ಮಹದೇವಸ್ವಾಮಿ, ಮಹದೇವಯ್ಯ, ಕೇಶವ, ಮಲ್ಲಣ್ಣ, ಕಿಕ್ಕೇರಿ ಶೆಟ್ಟಿ ಇದ್ದರು.