ರಾಷ್ಟ್ರೀಯ ಮಿಷನ್ ಅಡಿಯಲ್ಲಿ ಮೈಸೂರನ್ನು ಸೇರಿಸುವ ಕುರಿತು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಸಮಾಲೋಚನೆ ನಡೆಸಿದರು. 
ಮೈಸೂರು

ರಾಷ್ಟ್ರೀಯ ಮಿಷನ್ ಅಡಿ ಮೈಸೂರು ಸೇರಿಸಿ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಪ್ರವಾಸೋದ್ಯಮ ಸಚಿವರಿಗೆ ಸಂಸದ ಯದುವೀರ್ ಮನವಿ

ಮೈಸೂರು: 

ಮೈಸೂರನ್ನು ವಿಶ್ವಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಮಹತ್ವದ ಉದ್ದೇಶದೊಂದಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ್ದರು.

 ಕೇಂದ್ರ ಬಜೆಟ್ 2025-26ರಲ್ಲಿ ಘೋಷಿಸಲಾದ ಭಾರತದ 50 ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಮಿಷನ್ ಯೋಜನೆ ಅಡಿಯಲ್ಲಿ ಮೈಸೂರನ್ನು ಸೇರಿಸುವಂತೆ ಪ್ರಸ್ತಾವನೆ ಸಲ್ಲಿಸಿದರು.

ಮೈಸೂರಿನ ವಿಶಿಷ್ಟ ಸಾಂಸ್ಕೃತಿಕ, ಐತಿಹಾಸಿಕ, ಆಧ್ಯಾತ್ಮಿಕ ಹಾಗೂ ಪ್ರವಾಸೋದ್ಯಮದ ಮಹತ್ವವನ್ನು ವಿವರಿಸಿದ ಸಂಸದರು, ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯಲು ಅಗತ್ಯವಿರುವ ಎಲ್ಲ ಅರ್ಹತೆಗಳು ಮತ್ತು ಸಾಮರ್ಥ್ಯಗಳು ಮೈಸೂರಿಗೆ ಇವೆ ಎಂದು ಸಚಿವರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಮೈಸೂರಿನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಕೂಲಕರವಾಗಿ ಪರಿಗಣಿಸುವಂತೆ ಕೋರಿದರು.
ಈ ಕುರಿತು ಮಾತನಾಡಿದ ಯದುವೀರ್,  ಮೈಸೂರು ತನ್ನ ಶ್ರೀಮಂತ ಪರಂಪರೆ, ರಾಜಮನೆತನದ ವೈಭವ ಹಾಗೂ ಶಾಶ್ವತ ಸಾಂಸ್ಕೃತಿಕ ಪರಂಪರೆಯಿಂದ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಭಾರತದ ಅತ್ಯಂತ ಜನಪ್ರಿಯ ಪರಂಪರೆ ತಾಣಗಳಲ್ಲಿ ಒಂದಾದ ಮೈಸೂರು ಅರಮನೆ, ಜಾಗತಿಕ ಖ್ಯಾತಿಯ ಮೈಸೂರು ದಸರಾ, ಅದರ ಸಾಂಸ್ಕೃತಿಕ ಮಹತ್ವಕ್ಕಾಗಿ ಯುನೆಸ್ಕೋ ಮಾನ್ಯತೆ ಪಡೆದಿದೆ. 
ಯೋಗ ಮತ್ತು ವೆಲ್‌ನೆಸ್ ಕ್ಷೇತ್ರದಲ್ಲಿ ಮೈಸೂರಿನ ವಿಶಿಷ್ಟ ಸ್ಥಾನ, ಸಾಂಪ್ರದಾಯಿಕ ಕರಕುಶಲ ಕಲೆಗಳು, ಶ್ರೀಮಂತ ಕಲಾ ಸಂಸ್ಕೃತಿ, ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ವ್ಯವಸ್ಥೆ ಮೈಸೂರನ್ನು ಜಾಗತಿಕ ಪ್ರವಾಸಿ ತಾಣವನ್ನಾಗಿ ರೂಪಿಸಲು ಅತ್ಯುತ್ತಮ ಅಡಿಪಾಯವಾಗಿದೆ ಎಂದು ತಿಳಿಸಿದರು.
ಪ್ರತಿ ವರ್ಷ ಲಕ್ಷಾಂತರ ದೇಶ ಹಾಗೂ ವಿದೇಶಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಿರುವುದರಿಂದ, ಇದು ಭಾರತದ ಪ್ರಮುಖ ಪಾರಂಪರಿಕ ನಗರಗಳಲ್ಲಿ ಒಂದಾಗಿದೆ. ಈ ರಾಷ್ಟ್ರೀಯ ಮಿಷನ್‌ಗೆ ಮೈಸೂರನ್ನು ಸೇರಿಸುವುದರಿಂದ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳು, ಪರಂಪರೆ ತಾಣಗಳ ಸಂರಕ್ಷಣೆ, ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳನ್ನು ಆಕರ್ಷಿಸಲು  ಅವಕಾಶಗಳು ದೊರೆಯಲಿವೆ ಎಂದು ತಿಳಿಸಿದರು.
ಈ ಯೋಜನೆಯಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಸ್ಥಳೀಯ ಕಲಾವಿದರು ಹಾಗೂ ಕರಕುಶಲಗಾರರಿಗೆ ಉತ್ತೇಜನ ದೊರೆಯಲಿದೆ. ಸಣ್ಣ ಉದ್ಯಮಗಳು ಮತ್ತು ಆತಿಥ್ಯ ಕ್ಷೇತ್ರ ಮತ್ತಷ್ಟು ಬಲಗೊಳ್ಳಲಿದ್ದು, ಪ್ರವಾಸೋದ್ಯಮವನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಜೀವನಮಟ್ಟ ಸುಧಾರಿಸಲಿದೆ ಎಂದು ಸಂಸದರು ಹೇಳಿದರು. 
ವಿಕಸಿತ ಭಾರತ 2047ರ ಪರಿಕಲ್ಪನೆಗೆ ಅನುಗುಣವಾಗಿ ಮೈಸೂರನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದು ಭಾರತದ ನಾಗರಿಕತೆ, ಸಂಸ್ಕೃತಿ, ಆಧ್ಯಾತ್ಮಿಕತೆ, ಸುಸ್ಥಿರ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮದ ಶ್ರೇಷ್ಠತೆಯನ್ನು ವಿಶ್ವದ ಮುಂದೆ ಪ್ರದರ್ಶಿಸುವ ಮಹತ್ವದ ಹೆಜ್ಜೆಯಾಗಲಿದೆ ಎಂದು  ಅಭಿಪ್ರಾಯಪಟ್ಟರು.
ಇದೇ ವೇಳೆ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಮೈಸೂರಿನ ಸಾಮರ್ಥ್ಯ, ವಿಶೇಷತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಸಾಧ್ಯತೆ ಒಳಗೊಂಡ ಸಮಗ್ರ ಮತ್ತು ಸ್ಪರ್ಧಾತ್ಮಕ ಪ್ರಸ್ತಾವನೆಯನ್ನು ಸಿದ್ಧಪಡಿಸಿಶೀಘ್ರ ಸಲ್ಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮೈಸೂರಿಗೆ ಈ ರಾಷ್ಟ್ರೀಯ ಮಿಷನ್‌ನಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇನ್ನಷ್ಟು ಹೆಚ್ಚಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಮೈಸೂರಿನ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಿ ರಾಷ್ಟ್ರೀಯ ಮಿಷನ್‌ನ ಪ್ರಯೋಜನಗಳನ್ನು ನಗರಕ್ಕೆ ವಿಸ್ತರಿಸಲಿದೆ ಎಂಬ ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.