ಚಿಲ್ಕುಂದದಲ್ಲಿ ಲಕ್ಕಮ್ಮ-ಲಕ್ಷ್ಮಿದೇವಿ ದೇವಸ್ಥಾನವನ್ನು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಉದ್ಘಾಟಿಸಿದರು.
- Lakkamma-Lakshmi Devi Temple
ಹನಗೋಡು: ಹೋಬಳಿಯ ಚಿಲ್ಕುಂದ ಗ್ರಾಮದಲ್ಲಿ ಮರು ನಿರ್ಮಾಣಗೊಂಡಿರುವ ಗ್ರಾಮ ದೇವತೆ ಲಕ್ಕಮ್ಮ-ಲಕ್ಷ್ಮೀದೇವಿ ದೇವಸ್ಥಾನದ ಉದ್ಘಾಟನೆಯೊಂದಿಗೆ ಕಳಸ ಪ್ರತಿಷ್ಠಾಪನೆ ಹಾಗೂ ವಿವಿಧ ಪೂಜಾ ಕೈಂಕರ್ಯ ನೆರವೇರಿತು.
ದೇವಾಲಯವನ್ನು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು. ನಂತರ ದೇವಸ್ಥಾನದ ಗೋಪುರದ ಕಲಶ ಸ್ಥಾಪನೆಯಲ್ಲಿ ಭಾಗಿಯಾಗಿದ್ದರು. ಅಲ್ಲದೆ ದೇವರ ವಿಗ್ರಹಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ದೇಗುಲ ಉದ್ಘಾಟನೆ ಹಿನ್ನೆಲೆ ಗ್ರಾಮ ಸಮೀಪದ ಅಂಕಯ್ಯನ ಕೆರೆಯಲ್ಲಿ ದೇವರ ವಿಗ್ರಹಗಳನ್ನು ಸ್ವಚ್ಛಗೊಳಿಸಿ, ಶನಿವಾರ ಕೆರೆ ದಡದಲ್ಲಿ ವಿಗ್ರಹ ಹಾಗೂ ಕಳಸಗಳನ್ನಿಟ್ಟು ಪೂಜೆ ಸಲ್ಲಿಸಿ ಬಳಿಕ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯ ನೆರವೇರಿತು.
ಬಳಿಕ ಆಯೋಜಿಸಿದ್ದ ವೇದಿಕೆ ಸಮಾರಂಭದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಶ್ರಮಿಸಿದ ನಿವೃತ್ತ ಶಿಕ್ಷಕ ಚೆಲುವಯ್ಯ-ದೇವಮ್ಮ ದಂಪತಿ, ದೇವಾಲಯ ನಿರ್ಮಾಣಕ್ಕೆ ನೆರವಾದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಜಿಪಂ ಮಾಜಿ ಸದಸ್ಯ ಸಿ.ಟಿ.ರಾಜಣ್ಣ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಚಿಲ್ಕುಂದ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್, ಮಾಜಿ ಸದಸ್ಯ ಪದ್ಮನಾಭ ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಮುಖಂಡರು ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.