ಸರಗೂರು ತಾಲೂಕಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ಯಲ್ಲಿ ಆಯೋಜಿಸಿದ್ದ ಉಪಶಮನ ಆರೈಕೆ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಡಾ.ರವಿಕುಮಾರ್ ಮಾತನಾಡಿದರು. ಸಂಧ್ಯಾ, ವೆಂಕಟಸ್ವಾಮಿ, ನಂದಿನಿ ಇದ್ದರು. 
ಮೈಸೂರು

ಉಪಶಮನ ಆರೈಕೆಯಿಂದ ಜೀವನದ ಗುಣಮಟ್ಟ ಸುಧಾರಣೆ

ನಾಗೇಶ ಎಸ್

ಸರಗೂರು:

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ನೋವು, ರೋಗ ಲಕ್ಷಣಗಳು ಹಾಗೂ ಮಾನಸಿಕ ಒತ್ತಡದಿಂದ ಪರಿಹಾರ ನೀಡುವಲ್ಲಿ ಉಪಶಮನ ಆರೈಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್ ಹಾಗೂ ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಹಯೋಗದಲ್ಲಿ ಉಪಶಮನ ಆರೈಕೆ ಕುರಿತು ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೋಗಿ ಹಾಗೂ ಕುಟುಂಬದ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಉಪಶಮನ ಆರೈಕೆಯ ಮುಖ್ಯ ಉದ್ದೇಶವಾಗಿದೆ. ನೋವು, ಉಸಿರಾಟದ ತೊಂದರೆ, ಆಯಾಸ, ವಾಕರಿಕೆ, ಹಸಿವಿನ ತೊಂದರೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ. ರೋಗದ ಯಾವುದೇ ಹಂತದಲ್ಲೂ, ಇತರ ಚಿಕಿತ್ಸೆಗಳ ಜತೆಯಲ್ಲಿಯೇ ಉಪಶಮನ ಆರೈಕೆ ಪಡೆಯಬಹುದು. ತಾಲೂಕಿನಲ್ಲಿ ಪ್ರಸ್ತುತ 432 ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಹಾಗೂ ವಯೋವೃದ್ಧ ರೋಗಿಗಳಿಗೆ ಉಪಶಮನ ಆರೈಕೆ ನೀಡಲಾಗುತ್ತಿದೆ. ಇಂತಹ ರೋಗಿಗಳು ತಮ್ಮ ಗ್ರಾಮ ಅಥವಾ ಸುತ್ತಮುತ್ತಲಿನ ಪ್ರದೇಶದಲ್ಲಿ ಇದ್ದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆಸ್ಪತ್ರೆಯ ಡಾ.ಸಂಧ್ಯಾ, ಸಂಪನ್ಮೂಲ ವ್ಯಕ್ತಿಗಳಾದ ವೆಂಕಟಸ್ವಾಮಿ, ನಂದಿನಿ, ಮಂಜುಳಾ ಹಾಗೂ ಮಮತಾ, ಸಂಯೋಜಕರಾದ ರಾಜೇಶ್ ಮತ್ತು ಪ್ರವೀಣ್, ಆರೋಗ್ಯ ಕಾರ್ಯಕರ್ತರಾದ ನಂದೀಶ್, ಸಂತೋಷ್, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿ, ಸಮುದಾಯ ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ಆಶಾ ಕಾರ್ಯಕರ್ತೆಯರು ಇದ್ದರು.