ಕನ್ನಡಿಗರ ಮೇಲೆ ಮಲಯಾಳಂ ಭಾಷೆ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾವಲು ಪಡೆಯಿಂದ ಭಾನುವಾರ ಹಳೇ ಜಿಲ್ಲಾಧಿಕಾರಿ ಕಚೇರಿ ಮುಭಾಗ ಪ್ರತಿಭಟನೆ ನಡೆಯಿತು. 
ಮೈಸೂರು

ಕನ್ನಡಿಗರ ಮೇಲೆ ಮಲಯಾಳಂ ಭಾಷೆ ಹೇರಿಕೆ : ಮೈಸೂರಿನಲ್ಲಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ಗಡಿ ಭಾಗದ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಮೇಲೆ ಬಲವಂತವಾಗಿ ಮಲಯಾಳಂ ಭಾಷೆ ಹೇರಲು ಹೊರಟಿರುವ ಕೇರಳ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಹಳೇ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಕೇರಳ ಸರ್ಕಾರ ಈಗ ಚುನಾವಣೆ ಸಮಯದಲ್ಲಿ ಮತಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಲಯಾಳಿಗಳನ್ನು ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ. ಕೇರಳದ ಗಡಿ ಪ್ರದೇಶವಾದ ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಅಲ್ಲದೆ ಆ ಭಾಗದಲ್ಲಿ ಕನ್ನಡ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೀಗಿದ್ದರೂ ಮಲಯಾಳಂ ಭಾಷಾ ಮಸೂದೆ 2025ನ್ನು ಕೇರಳ ಸರ್ಕಾರ ಜಾರಿಗೆ ತರಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.
ಮಲಯಾಳಂ ಭಾಷಾ ಮಸೂದೆ-2025 ಸಂಪೂರ್ಣ ಅಸಂವಿಧಾನಿಕವಾಗಿದೆ. ಈ ಮಸೂದೆಯಿಂದ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಕನ್ನಡ ಮಾಧ್ಯಮ ಮಕ್ಕಳು ಇಷ್ಟವಿಲ್ಲದಿದ್ದರೂ ಮಲಯಾಳಂ ಕಲಿಯಬೇಕಾಗುತ್ತದೆ. ಭಾಷಾ ಸ್ವಾತಂತ್ರೃದ ಮೇಲೆ ಗಧಾಪ್ರಹಾರ ಮಾಡಿದಂತಾಗುತ್ತದೆ ಹಾಗೂ ಇದು ಭಾಷೆಯ ಹಕ್ಕಿನ ಉಲ್ಲಂಘನೆಯಾಗಲಿದೆ. ಇಂತಹದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿ ಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆ ಸದಸ್ಯರಾದ ಸುರೇಶ್ ಗೋಲ್ಡ್, ಪ್ರಭುಶಂಕರ್, ಪ್ರಜೀಶ್, ಡಾ.ಶಾಂತರಾಜೇ ಅರಸ್, ಕೃಷ್ಣಪ್ಪ, ಡಾ.ಮೊಗಣ್ಣಾಚಾರ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಹನುಮಂತೇಗೌಡ, ಮಂಜುಳ, ಭಾಗ್ಯಮ್ಮ, ಗಿರೀಶ್, ಮಧುವನ ಚಂದ್ರು ಹಾಗೂ ಇತರರು ಪಾಲ್ಗೊಂಡಿದ್ದರು.