ಸಿದ್ಧಾರ್ಥ ನಗರ ಸಂಚಾರ ಪೊಲೀಸ್ ಠಾಣೆ
ಮೈಸೂರು: ಮೈಸೂರು ನಗರಕ್ಕೆ ಹೊರಗಿನಿಂದ ಬರುವ ಪ್ರವಾಸಿಗರ ವಾಹನಗಳಿಗೆ ಯಾವುದಾರೂ ಒಂದು ಪಾಯಿಂಟ್‌ನಲ್ಲಿ ಸ್ಟಿಕರ್ ಹಾಕುವ ವ್ಯವಸ್ಥೆ ಜಾರಿಯಾಗಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಲಹೆ ನೀಡಿದರು.
ನಗರದ ಸಿದ್ದಾರ್ಥ ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಿದ್ಧಾರ್ಥ ನಗರ ಸಂಚಾರ ಪೊಲೀಸ್ ಠಾಣೆಯ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಮೈಸೂರಿಗೆ ನಿತ್ಯ ಲಕ್ಷಾಂತರ ಜನ ಪ್ರವಾಸಿಗರು ಬರುತ್ತಾರೆ. ಅವರನ್ನು ಗುರುತಿಸುವ ನಿಟ್ಟಿನಲ್ಲಿ ಅವರ ವಾಹನ ಮೈಸೂರಿಗೆ ನಗರಕ್ಕೆ ಪ್ರವೇಶದ ವೇಳೆ ಪ್ರವಾಸಿಗರು ಎಂಬ ಗುರುತಿನ ಸ್ಟಿಕರ್ ಹಾಕಬೇಕು. ಆ ಸ್ಟಿಕರ್ ನೋಡಿ ಎಲ್ಲರೂ ಅವರು ಪ್ರವಾಸಿಗರು ಎಂದು ಗುರುತಿಸಲು ಸಾಧ್ಯವಾಗುತ್ತದೆ. ಇದರಿಂದ ನಗರಕ್ಕೆ ಯಾರು ಬರುತ್ತಾರೆ ಎನ್ನುವುದು ತಿಳಿಯುತ್ತದೆ. ಪ್ರವಾಸಿಸ್ನೇಹಿ ವ್ಯವಸ್ಥೆ ಮಾಡಿದಂತಾಗುತ್ತದೆ. ಈ ಸಂಬಂಧ ಆಯುಕ್ತರು ಪರಿಶೀಲನೆ ಮಾಡಬೇಕು ಎಂದರು.
ಜತೆಗೆ ಮೈಸೂರು ಪೊಲೀಸರಿಗೂ ಈ ಸಂಬಂಧ ವಿಶೇಷ ತರಬೇತಿ ನೀಡಬೇಕು. ಪ್ರವಾಸಿಗರ ಜತೆ ಹೇಗೆ ನಡೆದುಕೊಳ್ಳಬೇಕು? ಹೇಗೆ ವ್ಯವಸರಿಸಬೇಕು? ಎಂದು ತರಬೇತಿ ನೀಡಬೇಕು ಎಂದರು. ಬೆಂಗಳೂರಿನಲ್ಲಿ ಟ್ರಾಫಿಕ್ ಸಂಬಂಧಿಸಿದ ದಂಡದ ಶೇ.50 ರಷ್ಟು ಹಣ ಸರ್ಕಾರಕ್ಕೆ ಹೊದರೆ ಉಳಿದ ಹಣ ಇಲಾಖೆಗೆ ನೀಡಲಾಗುತ್ತಿದೆ. ಅದೇ ವ್ಯವಸ್ಥೆಯನ್ನು ಮೈಸೂರಿನಲ್ಲೂ ಜಾರಿಗೆ ತರುವ ಸಂಬಂಧ ಪರಿಶೀಲಿಸುತ್ತೇನೆ. ಈ ಸಂಬಂಧ ಶಾಸಕ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ ಎಂದರು.
ಕುವೆಂಪು ನಗರದಲ್ಲಿ ಮತ್ತೊಂದು ಸಂಚಾರ ಪೊಲೀಸ್ ಠಾಣೆ ನಿರ್ಮಾಣ ಸಂಬಂಧ ಆಯುಕ್ತರು ಪರಿಶೀಲನೆ ಮಾಡಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು. ಜತೆಗೆ ಪೊಲೀಸ್ ಠಾಣೆಗಳ ಡಿ.ಲಿಮಿಟೇಷನ್ ಸಂಬಂಧ ಚರ್ಚೆ ಮಾಡಲಾಗುತ್ತದೆ. ಸದ್ಯ ಮೈಸೂರಿನಲ್ಲಿ 380 ಕ್ಯಾಮರಾ ಮಾತ್ರ ಇದೆ. ಇದು ಸಾಲುವುದಿಲ್ಲ. 2 ಸಾವಿರ ಕ್ಯಾಮರಾ ಅಳವಡಿಸಬೇಕು. ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗದಲ್ಲೂ ಸಿಸಿ ಕ್ಯಾಮರಾ ಬೇಕು. ಬೆಂಗಳೂರಿನಲ್ಲಿ ಸದ್ಯ 10,000 ಕ್ಯಾಮರಾ ಇವೆ. ಇಡೀ ಬೆಂಗಳೂರನ್ನು ಎಐ ಕ್ಯಾಮರಾದಲ್ಲಿ ನೋಡಬಹುದಾಗಿದೆ. ಮೈಸೂರಿನಲ್ಲಿ ಸಹ ವೈಜ್ಞಾನಿಕವಾಗಿ ಕೆಲಸ ಮಾಡಬೇಕಿದೆ. ಇಲ್ಲಿಗೆ ಹೆಚ್ಚು ಪ್ರವಾಸಿಗರು ಬರುವ ಕಾರಣ ಹೆಚ್ಚು ಕ್ಯಾಮರಾ, ಮಾಹಿತಿ ಕೇಂದ್ರ, ಪ್ರವಾಸಿಗರ ಸ್ನೇಹಿ ವ್ಯವಸ್ಥೆ ಜಾರಿ ಮಾಡಬೇಕಿದೆ ಎಂದರು.
ಮೈಸೂರಿನಲ್ಲಿ ವಿಶ್ವಕ್ಕೆ ತೋರಿರುವ ಇತಿಹಾಸ ಜೀವಂತವಾಗಿ ಉಳಿದಿದೆ. ನಾನು ಚಿಕ್ಕವನಾಗಿದ್ದಾಗ ನೋಡಿದ ಮೈಸೂರು ಈಗಲೂ ಹಾಗೇ ಇದೆ. ಮೈಸೂರು ತನ್ನ ಇತಿಹಾಸದ ಜತೆಯಲ್ಲಿಯೇ ಬೆಳೆದಿದೆ. ದೇಶದಲ್ಲೇ ನಂ.1 ಸ್ವಚ್ಛ ನಗರಿಯಾಗಿದೆ. ಇಲ್ಲಿ ಪ್ರವಾಸಿಗರಿಗೆ ಎಲ್ಲ ರೀತಿಯ ಆತಿಥ್ಯ ವಹಿಸಬೇಕಿದೆ. ಪೊಲೀಸ್, ಸಾರ್ವಜನಿಕರು ಎಲ್ಲರೂ ಪ್ರವಾಸಿಗರನ್ನು ಗೌರವದಿಂದ ಕಾಣಬೇಕೆಂದು ಮನವಿ ಮಾಡಿದರು.
ಕಳೆದ 10-15 ವರ್ಷಗಳಲ್ಲಿ ನಮ್ಮ ಪೊಲೀಸ್ ಇಲಾಖೆಯಲ್ಲಿ ಅನೇಕ ಬದಲಾವಣೆ ನಡೆದಿದೆ. ನಾನು ಮೊದಲ ಬಾರಿ ಗೃಹ ಸಚಿವ ಆಗಿದ್ದಾಗ ನಾನಾ ಬದಲಾವಣೆ ಮಾಡಿದ್ದೆ. ಆ ವೇಳೆ ನಮ್ಮ ಅಧಿಕಾರಿಗಳ ನಿಯೋಗ ಜರ್ಮನಿಗೆ ಹೋಗಿ ಅಲ್ಲಿನ ಪೊಲೀಸರು ಬಹಳ ಜನಸ್ನೇಹಿಯಾಗಿದ್ದರು. ಪ್ರವಾಸಿಗರನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಎಲ್ಲ ರೀತಿಯ ಮಾರ್ಗದರ್ಶನ ಮಾಡುತ್ತಿದ್ದರು. ಅವರ ವ್ಯವಸ್ಥೆ ನೋಡಿ ಖುಷಿಯಾಗಿತ್ತು. ಹಾಗಾಗಿ ನಮ್ಮಲ್ಲೂ ಅಂತಹ ವ್ಯವಸ್ಥೆ ಇರಬೇಕು ಎಂದು ‘ಜನಸ್ನೇಹಿ ಪೊಲೀಸ್’ ಜಾರಿ ಮಾಡಿದ್ದೇವೆ. ಇದೇ ಕಾರಣಕ್ಕೆ ಪ್ರತಿ ಠಾಣೆಗೆ 1 ಲಕ್ಷ ರೂ. ನೀಡುತ್ತಿದ್ದೇವೆ. ಠಾಣೆಗೆ ಬರುವ ಸಾರ್ವಜನಿಕರನ್ನು ಚೆನ್ನಾಗಿ ಉಪಚಾರ ಮಾಡಲಿ ಎಂದು ಹಣ ನೀಡಲಾಗುತ್ತಿತ್ತು ಎಂದರು.
ಜನರು ತನ್ನ ಕಷ್ಟಗಳಿಗೆ ಪರಿಹಾರ ಕೇಳಲು ದೇವಸ್ಥಾನಗಳಿಗೆ ಹೋಗುತ್ತಾರೆ. ಅದೇ ರೀತಿ ಪೊಲೀಸರಿಂದ ಸಹಾಯ ಕೇಳಲು ಠಾಣೆಗಳಿಗೆ ಬರುತ್ತಾರೆ. ಹೀಗೆ ಬರುವ ಸಾರ್ವಜನಿಕರನ್ನು ಪೊಲೀಸರು ಅಪರಾಧಿಗಳ ರೀತಿ ನೋಡಬಾರದು. ಪೊಲೀಸ್ ಠಾಣೆಗಳು ಜನಸ್ನೇಹಿ ಆಗಿರಬೇಕು. ಕಳ್ಳರ ಜತೆ ಫ್ರೆಂಡ್ಲಿ ಆಗಬಾರದು. ದೂರು ನೀಡಲು ಬರುವರಿಗೆ ಗೌರವ ನೀಡಬೇಕು ಎಂದು ಸೂಚನೆ ನೀಡಿದರು.
ಇಂಡಿಯನ್ ಜಸ್ಟಿಸ್ ರಿಪೋರ್ಟ್ ಪ್ರಕಾರ ದೇಶದ 120 ನಗರಗಳಲ್ಲಿ ಸೇಫ್ ಸಿಟಿಯಾಗಿ ಬೆಂಗಳೂರು 1ನೇ ಸ್ಥಾನವನ್ನು ಪಡೆದಿದೆ. 5 ಲಕ್ಷ ಜನಸಂಖ್ಯೆ ಇರುವ ಉದಯಗಿರಿಯ ಪೊಲೀಸ್ ಠಾಣೆಯನ್ನು 2 ವಿಭಾಗ ಮಾಡಿ ಹೊಸ ಪೊಲೀಸ್ ಠಾಣೆ ಮಾಡಲು ಕ್ರಮ ವಹಿಸಲಾಗುತ್ತಿದೆ. ಈಗಾಗಲೇ ಪಿ ಕ್ಯಾಪ್ ಅನ್ನು ಪೊಲೀಸ್ ಕಾನ್ಸ್ಟೇಬಲ್‌ಗಳಿಗೆ ಹೊಸ ರೀತಿಯ ಶೈಲಿಯಲ್ಲಿ ನೀಡಿದ್ದೇವೆ ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮೈಸೂರಿನ ಪೊಲೀಸ್ ಮತ್ತು ಬ್ಯಾಂಡ್‌ಗೆ ತನ್ನದೇ ಆದ ಗೌರವ ಮತ್ತು ಘನತೆ ಇದೆ. ಮೈಸೂರು ನಗರಕ್ಕೆ ಹಲವಾರು ದಕ್ಷ ಪೊಲೀಸರು ಅಧಿಕಾರಿಗಳು ತಮ್ಮ ಕೊಡುಗೆ ನೀಡಿದ್ದಾರೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ ಲಕ್ಷ್ಮೀಪುರಂ ಠಾಣೆ ವ್ಯಾಪ್ತಿಯ ವಿಸ್ತೀರ್ಣ ಬಹಳ ದೊಡ್ಡದಿರುವುದರಿಂದ ಕುವೆಂಪು ನಗರ ಭಾಗಕ್ಕೆ ಒಂದು ಸಂಚಾರ ಪೊಲೀಸ್ ಠಾಣೆಯನ್ನು ನಿರ್ಮಿಸಿಕೊಡಬೇಕು. ಇಂದು ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಸಂಚಾರ ವ್ಯವಸ್ಥೆ ಸುಗಮಗೊಳಿಸಬೇಕು ಎಂದು ಮನವಿ ಮಾಡಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಮೈಸೂರಿನ ಸುತ್ತಮುತ್ತ ಪರಿಸರ ವ್ಯವಸ್ಥೆ ಮತ್ತು ಅರಣ್ಯದಿಂದ ಆಕರ್ಷಣೆಯವಾಗಿ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮ ಇನ್ನು ಬಹಳಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಇಂದು ವ್ಯಸನ ಮುಕ್ತ ಜತೆಗೆ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾಗಿದೆ ಎಂದು ಹೇಳಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿಗೂ ಹೆಚ್ಚಿನ ಪೊಲೀಸ್ ಠಾಣೆಗಳನ್ನು ನಿರ್ಮಿಸಿಕೊಡಬೇಕು. ಹೆಣ್ಣು ಮಕ್ಕಳು ಇಂದು ಬೆಂಗಳೂರಿನಲ್ಲಿ ಧೈರ್ಯವಾಗಿ ಓಡಾಡುತ್ತಿದ್ದಾರೆ ಎಂದರೆ ಗೃಹ ಇಲಾಖೆ ಕಾರಣ. ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್‌ನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ವಿಧಾನ ಪರಿಷತ್ತು ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿದರು. ಮೈಸೂರು ಪೇಯಿಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಎಚ್.ಡಿ.ಗಣೇಶ್, ದಕ್ಷಿಣವಲಯ ಮಹಾನಿರೀಕ್ಷ ಎಂ.ಬಿ.ಡಾ.ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿಸಿಪಿ ಕೆ.ಎಸ್.ಸುಂದರ್‌ರಾಜ್ ಇತರರಿದ್ದರು.