ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರದ ಹನುಮನಪುರ ಗ್ರಾಮದಲ್ಲಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಶಾಸಕ ದರ್ಶನ್ ಧ್ರುವನಾರಾಯಣ ಬರದಿಂದ ಹಾನಿಯಾದ ಬೆಳೆ ವೀಕ್ಷಿಸಿದರು.
ಮೈಸೂರು ಜಿಲ್ಲೆಯಲ್ಲಿರುವ ಎಲ್ಲ ಕೆರೆ-ಕಟ್ಟೆಗಳಿಗೆ ತಕ್ಷಣವೇ ನೀರು ಬಿಡಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್ ಅದೇಶ ನೀಡಿದರು.
ಗುರುವಾರ ತಾಲೂಕಿನ ಹನುಮನಪುರ, ಚುಂಚನಹಳ್ಳಿ, ದೊಡ್ಡ ಕೌಲಂದೆ, ಗಟ್ಟವಾಡಿ ಇತರ ಭಾಗಗಳಲ್ಲಿ ಬರ ಪರಿಸ್ಥಿತಿ ಹಾಗೂ ಕುಡಿಯುವ ನೀರಿನ ಲಭ್ಯತೆ ಕುರಿತು ಸಮೀಕ್ಷೆ ನಡೆಸಿದರು.
ಮಧ್ಯಾಹ್ನ 3 ಗಂಟೆ ಸುಮಾರಿಗೆ ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ಹನುಮನಪುರಕ್ಕೆ ಆಗಮಿಸಿದ ಸಚಿವ ಯತಿಂದ ಸಿದ್ದರಾಮಯ್ಯ ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ, ಮಳೆ ಇಲ್ಲದೆ ಒಣಗಿದ ಜೋಳ ಗದ್ದೆಯನ್ನು ವೀಕ್ಷಿಸಿದರು. ನಂತರ ಪಕ್ಕದಲ್ಲಿರುವ ಚುಂಚನಹಳ್ಳಿ, ಗಟ್ಟವಾಡಿ, ಕೌಲಂದೆ, ಚಿಕ್ಕಕೌಲಂದೆ, ಬದನವಾಳು ಗ್ರಾಮಗಳ ಬೆಳೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರದಲ್ಲಿ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆ ನಂಜನಗೂಡು ಹಾಗೂ ವರುಣ ವಿಧಾನಸಭಾ ಕ್ಷೇತ್ರದ 45 ಗ್ರಾಮ ಪಂಚಾಯಿತಿಗಳು ಮಳೆ ಭಾರದ ಹಿನ್ನೆಲೆಯಲ್ಲಿ ಉಂಟಾಗಿರುವ ಬೆಳೆಗಳ ನಾಶ ಹಾಗೂ ಕಡಿಯುವ ನೀರಿನ ಲಭ್ಯತೆಯ ಬಗ್ಗೆ ಸಭೆ ನಡೆಸಿದರು.
ರಾಜ್ಯದಲ್ಲಿ ಬರದ ಚಾಯೆ ಮೂಡಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದ ಮೇಲೆ ಸಚಿವರು ಅಯಾ ಕ್ಷೇತ್ರಗಳ ಮಳೆ ಬೆಳೆ ಸಮೀಕ್ಷೆ, ಕುಡಿಯುವ ನೀರಿನ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದರು.
ನಂಜನಗೂಡು ತಾಲೂಕಿನಲ್ಲಿ ಒಟ್ಟಾರೆ 342,9 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈವರೆಗೆ 215.1 ಮಿ.ಮೀ. ಮಳೆಯಾಗಿದೆ. ಶೇ.37.3ರಷ್ಟು ಮಳೆ ಕೊರತೆಯಾಗಿದೆ. ತಾಲೂಕಿನಲ್ಲಿ 2,362 ಎಕ್ಟೇರ್ ನೀರಾವರಿ ಜಮೀನಿದ್ದು, 17,988 ಎಕ್ಟೇರ್ ಖುಷ್ಕಿ ಜಮೀನು ಇದೆ. ತಾಲೂಕಿನಲ್ಲಿ ಒಟ್ಟು 20,350 ಎಕ್ಟೇರ್ ವ್ಯವಸಾಯದ ಭೂಮಿ ಇದ್ದು. ಶೇ.40.27 ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನಲ್ಲಿರುವ ಓವರ್ ಹೇಡ್ ಪರಿಸ್ಥಿತಿ ಬಹಳ ಗಂಭೀರವಾಗಿದ್ದು, ಅಧಿಕಾರಿಗಳು ಕೂಡಲೇ ದುಸ್ಥಿತಿಯಲ್ಲಿರುವ ಟ್ಯಾಂಕ್‌ಗಳನ್ನು ತೆರವುಗೊಳಿಸಿ. ಕೆಲವು ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ಅವುಗಳನ್ನು ಸ್ವಚ್ಛಗೊಳಿಸಿ ಅವಶ್ಯಕತೆಗೆ ಬಳಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಂಜನಗೂಡು ಮೈಸೂರು ಮುಖ್ಯ ರಸ್ತೆ ಕಬಿನಿಗೆ ಅಡ್ಡಲಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನಗಳ ನಿರಂತರ ಓಡಾಟದಿಂದ ಅಧಿಕ ಒತ್ತಡ ಬೀಳುತ್ತಿದೆ. ನಿಷೇಧಿತ ಮೇಲ್ಸೇತುವೆ ಮೇಲೆ ಕನಿಷ್ಠ ದ್ವಿಚಕ್ರ ವಾಹನಗಳನ್ನು ಓಡಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅನುಮತಿ ನೀಡಿದರೆ ಉಪಯೋಗವಾಗುತ್ತದೆ. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ನೂತನ ಮೇಲ್ಸೇತುವೆ ಭಾರ ತಾಳಲಾರದೆ ಬಿರುಕು ಬಿಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ಕಬಿನಿ ಜಲಾಶಯದಲ್ಲಿ 18.06 ಟಿಎಂಸಿ ನೀರು ಸಂಗ್ರಹವಾಗಿದೆ. ಆದರೆ ಬೆಳೆ ಬೆಳೆಯಲು ನೀರು ಬಿಟ್ಟಿಲ್ಲ. ಹುಲ್ಲಹಳ್ಳಿ, ರಾಂಪುರ ಭಾಗದ ರೈತರಿಗೆ ಭತ್ತ ಬೆಳೆಯಲು ನೀರು ಹರಿಸಿದರೆ ಅನುಕೂಲವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿಯ ಕೆಲಸಗಳನ್ನು ದೂರು ನೀಡಿದ ನಂತರ ಎರಡು ದಿನದ ಒಳಗಾಗಿ ಸಮಸ್ಯೆ ಬಗೆಹರಿಯದೆ ಇದ್ದರೆ ಪಿಡಿಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಿರ್ದಾಕ್ಷ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಬರದ ಸಮಯದಲ್ಲಿ ಸಾರ್ವಜನಿಕರನ್ನು ಪಂಚಾಯಿತಿಗೆ ಅಲೆಸುವುದು ಒಳ್ಳೆಯದಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಗುಡುಗಿದರು.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ ಜಿಲ್ಲಾಧಿಕಾರಿ ಲಕ್ಷಿ ಕಾಂತ್ ರೆಡ್ಡಿ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಉಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇತರರು ಇದ್ದರು.