ಸಾಲಿಗ್ರಾಮ ತಾಲೂಕು ಆಡಳಿತ ಮತ್ತು ತಾಲೂಕು ಉಪ್ಪಾರ ಸಮಾಜದಿಂದ ಮಹರ್ಷಿ ಭಗೀರಥ ಜಯಂತಿ ಆಚರಿಸಲಾಯಿತು.
ಸಾಲಿಗ್ರಾಮ: ಮಹರ್ಷಿ ಭಗೀರಥ ಶ್ರೀಗಳು ಎಲ್ಲ ಜನಾಂಗದವರನ್ನು ಸಮಾನತೆಯಿಂದ ಕೊಂಡೊಯ್ಯಲು ಹೋರಾಡಿದ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ (ಗ್ರೇಡ್ 2) ಚಂದ್ರಶೇಖರ್ ಬಣ್ಣಿಸಿದರು.
ತಾಲೂಕು ಆಡಳಿತ ಮತ್ತು ತಾಲೂಕು ಉಪ್ಪಾರರ ಸಮಾಜದ ಮುಖಂಡರು ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಅಂಥ ಮಹನೀಯರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.
ಸಾಲಿಗ್ರಾಮ ಉಪ್ಪಾರ ಸಂಘದ ಅಧ್ಯಕ್ಷ ಎಸ್.ಟಿ.ಗವಿಗೌಡ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉಪ್ಪಾರರ ಸಮಾಜಕ್ಕೆ ಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಎರಡು ತಾಲೂಕುಗಳಾಗಿದ್ದು, 2 ತಾಲೂಕಿನಲ್ಲೂ ನಮ್ಮ ಸಮುದಾಯದ ಜನರ ಅಭಿವೃದ್ಧಿಗೆ ಶಾಸಕ ಡಿ.ರವಿಶಂಕರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಸಹಕರಿಸಬೇಕು ಎಂದರು.
ಭಗೀರಥ ಉಪ್ಪಾರ ಸಂಘದಿಂದ ಟೌನ್‌ನಲ್ಲಿ ಸಮುದಾಯ ಭವನ ಕಟ್ಟಲು ಈಗಾಗಲೇ ನಿವೇಶನ ಖರೀದಿ ಮಾಡಲಾಗಿದೆ. ಸರ್ಕಾರದ ಅನುದಾನಕ್ಕಾಗಿ ನಾಲ್ಕು ವರ್ಷಗಳ ಹಿಂದೆಯೇ ಬೇಡಿಕೆ ಇಟ್ಟಿದ್ದು, ಇನ್ನೂ ಮಂಜೂರು ಮಾಡಿಲ್ಲ. ಕೂಡಲೇ ಅನುದಾನ ಬಿಡುಗಡೆ ಮಾಡುವ ಮೂಲಕ ಸಮುದಾಯ ಭವನ ನಿರ್ಮಾಣಕ್ಕೆ ಚುನಾಯಿತ ಪ್ರತಿನಿಧಿಗಳು ಮುಂದಾಗಬೇಕು ಎಂದು ಮನವಿ ಮಾಡಿದರು.
ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ವಾಸ ಮಾಡಲು ಮನೆ ಇಲ್ಲದೆ ನಮ್ಮ ಸಮಾಜದ ಅನೇಕ ಕುಟುಂಬಗಳು ಸರ್ಕಾರಿ ಇಲಾಖೆ ಮತ್ತು ರಾಜಕಾರಣಿಗಳ ಮನೆ ಬಾಗಿಲಿಗೆ ಅಲೆದಾಡುತ್ತಿದ್ದಾರೆ. ಕೂಡಲೇ ಅಂತಹ ಬಡ ಕುಟುಂಬಗಳಿಗೆ ಆಶ್ರಯ ಮನೆ ನೀಡಬೇಕು ಎಂದು ಒತ್ತಾಯಿಸಿದರು.
ಮಹರ್ಷಿ ಭಗೀರಥ ಅವರ ಭಾವಚಿತ್ರಕ್ಕೆ ಮುಖಂಡರು, ಅಧಿಕಾರಿಗಳು ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ತಿಮ್ಮಯ್ಯ, ಹರದನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರದೀಪ್, ಕರ್ಪೂರವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಂಪುರ ಲೋಕೇಶ್, ಸಾಲಿಗ್ರಾಮ ಪಟ್ಟಣ ಉಪ್ಪಾರ ಸಂಘದ ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ನವೀನ್, ಸಮಾಜದ ಮುಖಂಡರಾದ ವೆಂಕಟೇಶ್, ಪುನೀತ್, ನಾಗಣ್ಣ, ಶಿಕ್ಷಕ ಸುರೇಶ್, ಮಂಜು, ರಮೇಶ್, ಸಾಲಿಗ್ರಾಮ ಜಯರಾಮ್, ಪ್ರಕಾಶ್, ಜವರಾಯಿ, ಬಾಬು, ರವಿ, ಹರದನಹಳ್ಳಿ ಜಯರಾಂ, ಕಂದಾಯ ಇಲಾಖೆ ಹಂಸ, ರಾಕೇಶ್, ಸುಶೀಲಮ್ಮ, ಸುನಿಲ್ ಇದ್ದರು.