ಮೈಸೂರು: ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿ ವಿತರಣೆ ಮಾಡಲಾಗುವ ಪಡಿತರ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಆರೋಪದ ಮೇಲೆ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಹಾರ ನಿರೀಕ್ಷಕ ವಿ.ಎನ್.ರವಿ ನೀಡಿದ ದೂರಿನ ಮೇರೆಗೆ, ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7ರ ಅಡಿಯಲ್ಲಿ ಎಸ್. ಭರತ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜು.23ರಂದು ಮಧ್ಯಾಹ್ನ ವಿನಾಯಕನಗರ ನ್ಯಾಯಬೆಲೆ ಅಂಗಡಿಗಳ ಪರಿಶೀಲನೆ ವೇಳೆ ಆಹಾರ ನಿರೀಕ್ಷಕರಿಗೆ ಕಪ್ಪು ಬಣ್ಣದ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯ ವರ್ತನೆ ಅನುಮಾನಾಸ್ಪದವಾಗಿ ಕಂಡಿತು. ಆತನನ್ನು ಹಿಂಬಾಲಿಸಿ ವಿನಾಯಕನಗರ 3ನೇ ಕ್ರಾಸ್‌ನಲ್ಲಿರುವ ಶೆಡ್‌ವೊಂದನ್ನು ಪರಿಶೀಲಿಸಿದಾಗ, ಯಾವುದೇ ದಾಖಲೆ ಅಥವಾ ಅನುಮತಿ ಇಲ್ಲದೆ ದೊಡ್ಡ ಪ್ರಮಾಣದಲ್ಲಿ ಅಕ್ಕಿ ಹಾಗೂ ರಾಗಿಯನ್ನು ಸಂಗ್ರಹಿಸಿರುವು ದು ಬೆಳಕಿಗೆ ಬಂದಿದೆ.
ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ನಡೆಸಿದ ಮಹಜರಿನಲ್ಲಿ 57 ಪ್ಲಾಸ್ಟಿಕ್ ಚೀಲಗಳಲ್ಲಿ ಸುಮಾರು 29.35 ಕ್ವಿಂಟಾಲ್ ಅಕ್ಕಿ ಹಾಗೂ 11 ಚೀಲಗಳಲ್ಲಿ 2.50 ಕ್ವಿಂಟಾಲ್ ರಾಗಿ ಪತ್ತೆಯಾಗಿದೆ. ಇವುಗಳ ಒಟ್ಟು ಅಂದಾಜು ಮೌಲ್ಯ 1 ಲಕ್ಷ ರೂ.ಆಗಿದೆ. ಜತೆಗೆ ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರಗಳು ಹಾಗೂ ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳ ಲಾಗಿದೆ.